ಫ್ಯಾಶನ್ ಗೋಲ್ಡ್ ಠೇವಣಿ ವಂಚನೆ: ಎಂ.ಸಿ. ಖಮರುದ್ದೀನ್, ಟಿ.ಕೆ. ಪೂಕೋಯ ತಂಙಳ್ ಇ.ಡಿಯಿಂದ ಸೆರೆ

ಕಾಸರಗೋಡು: ಫ್ಯಾಶನ್ ಗೋಲ್ಡ್ ಠೇವಣಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿ ಮಂಜೇಶ್ವರದ ಮಾಜಿ ಶಾಸಕರೂ, ಮುಸ್ಲಿಂ ಲೀಗ್ ನೇತಾರ ನಾಗಿದ್ದ ಎಂ.ಸಿ. ಖಮರುದ್ದೀನ್ ಹಾಗೂ ಮುಸ್ಲಿಂ ಲೀಗ್ ಮಾಜಿ ಕಾರ್ಯಕಾರಿ ಸಮಿತಿ ಸದಸ್ಯ ಟಿ.ಕೆ. ಪೂಕೋಯ ತಂಙಳ್‌ರನ್ನು ಇ.ಡಿ ಬಂಧಿಸಿದೆ. ಫ್ಯಾಶನ್ ಗೋಲ್ಡ್ ಠೇವಣಿ ವಂಚನೆಗೆ ಸಂಬಂಧಿಸಿ ಹಲವು ಮಂದಿ ನೀಡಿದ ದೂರುಗಳ  ಕುರಿತು ಇ.ಡಿ ಕೂಡಾ ತನಿಖೆ ನಡೆಸುತ್ತಿದೆ. ಎಂ.ಸಿ. ಖಮರುದ್ದೀನ್ ಹಾಗೂ ಟಿ.ಕೆ. ಪೂಕೋಯ ತಂಙಳ್‌ರನ್ನು ತನಿಖೆಗಾಗಿ ಎರಡು ದಿನಗಳ ಹಿಂದೆ ಕಲ್ಲಿಕೋಟೆಗೆ ಕರೆಸಲಾಗಿತ್ತು. ಅದರ ಬೆನ್ನಲ್ಲೇ ಬಂಧಿಸಲಾಗಿದೆ. ಬಂಧಿತರಿಗೆ ರಿಮಾಂಡ್ ವಿಧಿಸಲಾಗಿದೆ.

130 ಕೋಟಿ ರೂಪಾಯಿಗಳ ಠೇವಣಿಯನ್ನು ಮೂರು  ಜ್ಯುವೆಲ್ಲರಿ ಗಳ ಹೆಸರಲ್ಲಿ ಸಂಗ್ರಹಿಸಿ ವಂಚಿಸಿರು ವುದಾಗಿ ಕೇಸು ದಾಖಲಿಸಲಾಗಿದೆ. ಜ್ಯುವೆಲ್ಲರಿ ಕಾರ್ಯಾಚರಿಸುತ್ತಿದ್ದ ನಾಲ್ಕು ಜಿಲ್ಲೆಗಳಲ್ಲಾಗಿ 168 ಕೇಸುಗಳನ್ನು ವಂಚನೆಗೆ ಸಂಬಂಧಿಸಿ ದಾಖಲಿಸಲಾಗಿದೆ. 800ರಷ್ಟು ದೂರುಗಳು ಲಭಿಸಿತ್ತು. ಪ್ರಕರಣಕ್ಕೆ ಸಂಬಂಧಿಸಿ ಎಂ.ಸಿ. ಖಮರುದ್ದೀನ್ ರನ್ನು 2020 ನವಂಬರ್‌ನಲ್ಲಿ ಬಂಧಿಸಲಾಗಿತ್ತು. ಫ್ಯಾಶನ್ ಗೋಲ್ಡ್ ನ ಹೊರತು ಖಮರ್‌ಗೋಲ್ಡ್, ನುಜುಂ ಗೋಲ್ಡ್, ಫ್ಯಾಶನ್ ಗೋಲ್ಡ್ ಓರ್ನಮೆಂಟ್ಸ್ ಎಂಬೀ  ಕಂಪೆನಿಗಳ   ಕೇಸುಗಳು ಬೇರೆಯೇ ಇದೆ.

800ರಷ್ಟು ಮಂದಿ ಠೇವಣಿದಾರರಿದ್ದ ಫ್ಯಾಶನ್‌ಗೋಲ್ಡ್‌ಗೆ ಚೆರ್ವತ್ತೂರು, ಪಯ್ಯನ್ನೂರು, ಕಾಸರಗೋಡು ಎಂಬಿಡೆಗಳಲ್ಲಿದ್ದ ಮೂರು ಬ್ರಾಂಚ್‌ಗಳನ್ನು ಜನವ ರಿಯಲ್ಲಿ ಮುಚ್ಚುಗಡೆಗೊಳಿಸಲಾಗಿತ್ತು. ಆದರೆ ಠೇವಣಿದಾರರಿಗೆ ಹಣ ಮರಳಿ ನೀಡಿಲ್ಲ. ಹಣ ಮರಳಿ ಲಭಿಸದ ಹಿನ್ನೆಲೆಯಲ್ಲಿ ಠೇವಣಿದಾರರು ದೂರು ನೀಡಿದ್ದಾರೆ. ದೂರುಗಾರರ ಪೈಕಿ ಹಲವರಿಂದ ಇ.ಡಿ ಮಾಹಿತಿ ಸಂಗ್ರಹಿಸಿದೆ. ಈ ಪೈಕಿ ಭಾರೀ ಮೊತ್ತ ಠೇವಣಿಯಿರಿಸಿದವರ ಕುರಿತು  ತನಿಖೆ ನಡೆಯುತ್ತಿದೆ. ವ್ಯವಹಾರ ನಡೆಸಿದ ಕೆಲವು ಪ್ರಮುಖರು ಪ್ರಕರಣದಲ್ಲಿ ಆರೋಪಿಗಳಾಗುವ ಸೂಚನೆ ತನಿಖಾ ತಂಡದಿಂದ ಲಭಿಸಿದೆ.

You cannot copy contents of this page