ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ:ಪೂಕೋಯ ತಂಙಳ್, ಎಂ.ಸಿ. ಖಮರುದ್ದೀನ್‌ರ ಸೊತ್ತು ಮುಟ್ಟುಗೋಲು
ಕಾಸರಗೋಡು: ಫ್ಯಾಶನ್ ಗೋಲ್ಡ್ ಠೇವಣಿ ವಂಚನೆ ಪ್ರಕರಣದಲ್ಲಿ ಆರೋಪಿಗಳಾದ ಮುಸ್ಲಿಂ ಲೀಗ್ ನೇತಾರರ ಸೊತ್ತುಗಳನ್ನು ಮುಟ್ಟುಗೋಲು ಹಾಕಿ ಸರಕಾರ ಆದೇಶ ಹೊರಡಿಸಿದೆ. ಕಂಪೆನಿಯ ಎಂ.ಡಿ ಹಾಗೂ ಲೀಗ್ ನೇತಾರನಾಗಿದ್ದ ಚಂದೇರದ ಪೂಕೋಯ ತಂಙಳ್, ಚೆಯರ್ ಮೆನ್ ಮಾಜಿ ಶಾಸಕ ಎಂ.ಸಿ ಖಮರುದ್ದೀನ್ ಎಂಬಿವರ ಸೊತ್ತುಗಳನ್ನು ಮುಟ್ಟುಗೋಲು ಹಾಕಲಾಗಿದೆ. ಅನಿಯಂತ್ರಿತ ಠೇವಣಿ ಯೋಜನೆ ನಿಷೇಧ ಕಾನೂನು ಪ್ರಕಾರ ಹೊಣೆಗಾರಿಕೆಯುಳ್ಳ ರಾಜ್ಯ ಮಟ್ಟದ ಅಧಿಕಾರಿಯಾದ ರಾಜ್ಯ ಫಿನಾನ್ಸ್ ಸೆಕ್ರೆಟರಿ ಸಂಜಯ್ ಎಂ. ಕೌಲ್ ಅವರು ಸೊತ್ತುಗಳನ್ನು ಮುಟ್ಟುಗೋಲು ಹಾಕಿ ಆದೇಶ ಹೊರಡಿಸಿದ್ದಾರೆ.
ಪ್ರಕರಣದ ತನಿಖೆಗೆ ಮೇಲ್ನೋಟ ವಹಿಸುವ ಕಣ್ಣೂರು ಕ್ರೈಂಬ್ರಾಂಚ್ ಎಸ್ಪಿ ಪಿ.ಪಿ. ಸದಾನಂದನ್‌ರ ವರದಿಯ ಪ್ರಕಾರ ಈ ಕ್ರಮ ಕೈಗೊಳ್ಳಲಾಗಿದೆ. ಕಂಪೆನಿಯ ಚೆಯರ್‌ಮೆನ್ ಎಂ.ಸಿ. ಖಮರೀದ್ದೀನ್, ಎಂ.ಡಿ ಪೂಕೋಯ ತಂಙಳ್ ಎಂಬಿವರ ಹೆಸರಲ್ಲಿ ಪಯ್ಯನ್ನೂರು ನಗರದಲ್ಲಿ ಕಾರ್ಯಾಚರಿಸುತ್ತಿರುವ ನಾಲ್ಕು ಕೊಠಡಿಗಳೊಳಗೊಂಡ ಫ್ಯಾಶನ್ ಆರ್ನಮೆಂಟ್ಸ್ ಜ್ಯುವೆಲ್ಲರಿ ಕಟ್ಟಡ ಹಾಗೂ ಬೆಂಗಳೂರು ಸಿಲಿಕುಂಡ ವಿಲ್ಲೇಜ್‌ನಲ್ಲಿ ಪೂಕೋಯ ತಂಙಳ್‌ರ ಹೆಸರಲ್ಲಿರುವ ೧ ಎಕ್ರೆ ಭೂಮಿ ಮುಟ್ಟುಗೋಲು ಹಾಕಿಕೊಂಡ ಸೊತ್ತುಗಳಲ್ಲಿ ಒಳಗೊಂಡಿದೆ.
ಈ ಹಿಂದೆ ಬೇರೊಬ್ಬರಿಗೆ ಮಾರಾಟಗೈದಿದ್ದ ಖಮರ್ ಫ್ಯಾಶನ್ ಗೋಲ್ಡ್ ಜ್ಯುವೆಲ್ಲರಿಗಾಗಿ ಎಂ.ಸಿ. ಖಮರುದ್ದೀನ್ ಹಾಗೂ ಪೂಕೋಯ ತಂಙಳ್‌ರ ಹೆಸರಲ್ಲಿ ಕಾಸರಗೋಡು ನಗರದಲ್ಲಿ ಖರೀದಿಸಿದ ಭೂಮಿ ಹಾಗೂ ಅದರಲ್ಲಿರುವ ನಾಲ್ಕು ಕಟ್ಟಡ ಕೊಠಡಿಗಳನ್ನೂ ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ೧೭೦ಕ್ಕಿಂತ ಹೆಚ್ಚು ಮಂದಿ ಠೇವಣಿದಾರರಿಗೆ ೨೬ ಕೋಟಿ ರೂ.ಗಿಂತ ಹೆಚ್ಚು ಮೊತ್ತ ಮರಳಿ ನೀಡಲು ಬಾಕಿಯಿರುವಾಗ ಕಂಪೆನಿಗೆ ಬಾಧ್ಯತೆಯುಳ್ಳ ಒಬ್ಬರಿಗೆ ಮಾತ್ರ ಕಟ್ಟಡವನ್ನು ಮಾರಾಟಗೈದಿರುವುದು ಕಾನೂನು ಪ್ರಕಾರ ಸರಿಯಲ್ಲವೆಂದು ಸರಕಾರದ ಆದೇಶದಲ್ಲಿ ತಿಳಿಸಲಾಗಿದೆ. ಎಂ.ಡಿ ಹಾಗೂ ಚೆಯರ್ ಮೆನ್‌ರ ಹೆಸರಲ್ಲಿ ಚೆರ್ವತ್ತೂರು, ಕಯ್ಯೂರು, ತೃಕ್ಕರಿಪುರ, ಪಯ್ಯನ್ನೂರು, ಕಾಲಿಕಡವ್ ಎಂಬಿಡೆಗಳ ವಿವಿಧ ಬ್ಯಾಂಕ್ ಗಳಲ್ಲಿರುವ ಖಾತೆಗಳನ್ನು ಮುಟ್ಟುಗೋಲು ಹಾಕಲಾಗಿದೆ.