ಬಂಧಿತ ಬಾಂಗ್ಲಾ ಪ್ರಜೆ ಅಲ್‌ಖೈದಾ ಭಯೋತ್ಪಾದಕರ ಸಂಘಟನೆಯ ‘ಸ್ಲೀಪಿಂಗ್ ಸೆಲ್’ ಸದಸ್ಯ

ಕಾಸರಗೋಡು: ಹೊಸದುರ್ಗ ಪಡನ್ನಕ್ಕಾಡ್‌ನ ಕ್ವಾರ್ಟರ್ಸ್‌ನಿಂದ ಡಿ. 18ರಂದು ಮುಂಜಾನೆ ಅಸ್ಸಾಂ ಸ್ಪೆಷಲ್ ಟಾಸ್ಟ್ ಫೋರ್ಸ್‌ನ ಪೊಲೀಸರು ಬಂಧಿಸಿದ ಬಾಂಗ್ಲಾದೇಶದ ಧಿರಂಪುರ್ ಗ್ರಾಮದ ರಾಜ್‌ಶಾಹಾ ಸಿಟಿಯ ಉಗ್ರ ಎಂ.ಬಿ. ಮೊಹಮ್ಮದ್ ಶಾಬ್‌ಶೇಖ್ (32) ಅಂತಾರಾಷ್ಟ್ರೀಯ ಭಯೋತ್ಪಾ ದಕರ ಸಂಘಟನೆಯಾದ ಇಷಾಲ್ ಅಲ್‌ಖೈದಾದ ಸ್ಲೀಪಿಂಗ್ ಸೆಲ್ ಸದಸ್ಯನಾಗಿರುವ ಆತಂಕಕಾರಿ ಮಾಹಿತಿ ಹೊರ ಬಂದಿದೆ.

ಅಸ್ಸಾಂನಲ್ಲಿ ನಡೆದ ಹಲವು ಭಯೋತ್ಪಾದಕ ಕೃತ್ಯಗಳಯೂ ಆರೋಪಿಯಾಗಿರುವ ಆತನ ವಿರುದ್ಧ ಅಸ್ಸಾಂ ಪೊಲೀಸರು ಯುಪಿಪಿಎ ಕಾನೂನು ಪ್ರಕಾರ ಕೇಸು ದಾಖಲಿಸಿಕೊಂಡಿದ್ದರು.

೨೦೧೮ರಲ್ಲಿ ಆತ ಅಲ್ಲಿಂದ ತಪ್ಪಿಸಿಕೊಂಡು ಕಾಸರಗೋಡಿಗೆ ಬಂದು ಜಿಲ್ಲೆಯ ವಿವಿಧೆಡೆಗಳಲ್ಲಿ ಹೊರ ರಾಜ್ಯ ವಲಸೆ ಕಾರ್ಮಿಕರ ಸೋಗಿನಲ್ಲಿ ವಾಸಿಸಿ ಗಾರೆ ಕಾರ್ಮಿಕರನಾಗಿ ದುಡಿ ಯುತ್ತಿದ್ದನು. ಈತ ಬಾಂಗ್ಲಾದೇಶದ ‘ಅನುಸಾವುಳ ಬಾಂಗ್ಲಾ’ ಎಂಬ ಉಗ್ರಗಾಮಿ ಸಂಘಟನೆಯ ಸಕ್ರಿಯ ಸದಸ್ಯನೂ ಆಗಿರುವುದನ್ನೂ ತನಿಖಾ ತಂಡ ಪತ್ತೆಹಚ್ಚಿದೆ. ಭಯೋತ್ಪಾದಕ ಸಂಘಟನೆಯ ಸ್ಲೀಪಿಂಗ್ ಸೆಲ್ ಆಗಿರುವ ಈತ ಹಲವು ಹಿಂದೂ ಸಂಘಟನೆಗಳ ನೇತಾರರನ್ನು ಹತ್ಯೆಗೈಯ್ಯುವ ಹಾಗೂ ಆ ಮೂಲಕ ಕೋಮುದಳ್ಳುರಿ ತಲೆಯೆತ್ತುವಂತೆ ಮಾಡಿ ಭಾರತದಲ್ಲಿ ಅಸ್ಥಿರತೆ ಉಂಟು ಮಾಡುವ ಸ್ಕೆಚ್ ಹಾಕಿಕೊಂಡಿದ್ದನೆಂಬ ಅತೀವ ಕಳವಳಕಾರಿ ಮಾಹಿತಿಯೂ ತನಿಖಾ ತಂಡಕ್ಕೆ ಲಭಿಸಿದೆ.

ಮಾತ್ರವಲ್ಲ ಈ ಉಗ್ರನ ಸಹಾಯಕರಾಗಿ ಇನ್ನೂ ಹಲವರು ಭಾರತಕ್ಕೆ ನುಸುಳಿ ವಲಸೆಕಾರ್ಮಿಕರ ಸೋಗಿನಲ್ಲಿ ಭೂಗತವಾಗಿ ಕಾರ್ಯವೆಸ ಗುತ್ತಿರಬಹುದೆಂಬ ಶಂಕೆಯನ್ನು ತನಿಖಾ ತಂಡ ವ್ಯಕ್ತಪಡಿಸಿದ್ದು, ಆ ಹಿನ್ನೆಲೆಯಲ್ಲಿ ಅವರನ್ನು ಗುರುತಿಸುವ ಗುಪ್ತ ಕಾರ್ಯಾಚರಣೆಯಲ್ಲಿ ಪೊಲೀಸರು ತೊಡಗಿದ್ದಾರೆ.

ಬಂಧಿತ ಉಗ್ರ ನಕಲಿ ದಾಖಲು ಪತ್ರಗಳನ್ನು ಉಪಯೋಗಿಸಿ ಬ್ಯಾಂಕೊಂದರಲ್ಲಿ ಖಾತೆಯನ್ನು ತೆರೆದಿರುವುದನ್ನು ತನಿಖಾ ತಂಡ ಪತ್ತೆಹಚ್ಚಿದ್ದು, ಅದಕ್ಕಾಗಿ ಆತನಿಗೆ ಸಹಾಯ ಒದಗಿಸಿದವರ ಬಗ್ಗೆಯೂ ಪೊಲೀಸರು ಇನ್ನೊಂದೆಡೆ ತನಿಖೆ ನಡೆಸುತ್ತಿದ್ದಾರೆ. ಮಾತ್ರವಲ್ಲ  ಜಿಲ್ಲೆಯ ವಿವಿಧೆಡೆಗಳಲ್ಲಿ ಆತ ವಾಸಿಸುತ್ತಿದ್ದ ಕ್ವಾರ್ಟರ್ಸ್‌ಗಳನ್ನು ಕೇಂದ್ರೀಕರಿಸಿ ಹಾಗೂ ಅಲ್ಲಿ ಆತನ ಜತೆ ವಾಸಿಸುತ್ತಿದ್ದವರ ಬಗ್ಗೆಯೂ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಉಗ್ರ ಮೊಹಮ್ಮದ್ ಶಾಬ್‌ಶೇಖ್, ನಕಲಿ ಆಧಾರ್‌ಕಾರ್ಡ್, ಪಾನ್‌ಕಾರ್ಡ್, ಭಾರತೀಯ ಚುನಾವಣಾ ಗುರುತು ಚೀಟಿಯನ್ನು ಹೊಂದಿದ್ದು, ಅದನ್ನು ತಯಾರಿಸಿ ಆತನಿಗೆ ನೀಡಿದ್ದವರ ಬಗ್ಗೆ ಕೇಂದ್ರ ಗುಪ್ತಚರ ವಿಭಾಗವೂ ಇನ್ನೊಂದೆಡೆ ಸಮಾನಾಂತರ ತನಿಖೆ ನಡೆಸುತ್ತಿದೆ.

Leave a Reply

Your email address will not be published. Required fields are marked *

You cannot copy content of this page