ಬದಿಯಡ್ಕದ ಆಟೋ ಚಾಲಕ ನಿಗೂಢ ನಾಪತ್ತೆ: ಮೊಬೈಲ್ ಸ್ವಿಚ್ ಆಫ್, ಆಟೋರಿಕ್ಷಾ ನಿಲುಗಡೆಗೊಳಿಸಿದ ಸ್ಥಿತಿಯಲ್ಲಿ ಪತ್ತೆ
ಬದಿಯಡ್ಕ: ಬದಿಯಡ್ಕದ ಆಟೋರಿಕ್ಷಾ ಚಾಲಕನೋರ್ವ ನಿಗೂಢ ರೀತಿಯಲ್ಲಿ ನಾಪತ್ತೆಯಾದ ಬಗ್ಗೆ ದೂರಲಾಗಿದೆ. ಕನ್ಯಪ್ಪಾಡಿ ಬಳಿಯ ಕರ್ಕಟಪಳ್ಳ ನಿವಾಸಿ ಶ್ರೀಧರ ಎಂಬವರ ಪುತ್ರ ನಿತಿನ್ ಕುಮಾರ್ (29) ಎಂಬವರು ನಾಪತ್ತೆಯಾದ ಯುವಕ. ಬದಿಯಡ್ಕದ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿದ್ದ ಇವರು ಬದಿಯಡ್ಕ ಮೇಲಿನಪೇಟೆಯಲ್ಲಿ ಆಟೋರಿಕ್ಷಾ ಬಾಡಿಗೆಗೆ ನಿಲ್ಲಿಸುತ್ತಿದ್ದರು. ಮೊನ್ನೆ ಬೆಳಿಗ್ಗೆ ಎಂದಿನಂತೆ ಆಟೋರಿಕ್ಷಾದೊಂದಿಗೆ ಮನೆಯಿಂದ ತೆರಳಿದ್ದರು. ಆದರೆ ಅನಂತರ ಅವರು ಮನೆಗೆ ಮರಳಿ ತಲುಪಿಲ್ಲವೆನ್ನಲಾಗಿದೆ. ವಿವಿಧೆಡೆ ಹುಡುಕಾಡಿದರೂ ನಿತಿನ್ ಕುಮಾರ್‌ರನ್ನು ಪತ್ತೆಹಚ್ಚಲು ಸಾಧ್ಯವಾಗಲಿಲ್ಲ.
ಸಂಬಂಧಿಕರು ಹಾಗೂ ಸ್ನೇಹಿತರು ನಿತಿನ್‌ಕುಮಾರ್‌ರ ಮೊಬೈಲ್ ಫೋನ್‌ಗೆ ಕರೆ ಮಾಡಿದರೂ ಅದು ಸ್ವಿಚ್‌ಆಫ್ ಆದ ಸ್ಥಿತಿಯಲ್ಲಿರುವುದಾಗಿ ತಿಳಿದುಬಂದಿದೆ. ಅವರನ್ನು ಪತ್ತೆಹಚ್ಚಲು ಹುಡುಕಾಟ ನಡೆಸುತ್ತಿರುವಾಗ ಆಟೋರಿಕ್ಷಾ ಬದಿಯಡ್ಕ ಸಿಎಚ್‌ಸಿ ಬಳಿ ವ್ಯಕ್ತಿಯೊಬ್ಬರ ಸ್ಥಳದಲ್ಲಿ ನಿಲ್ಲಿಸಿರುವುದು ಕಂಡು ಬಂದಿದೆ. ಈ ಹಿನ್ನೆಲೆಯಲ್ಲಿ ಸಂಬಂಧಿಕನಾದ ಬದಿಯಡ್ಕ ನಿವಾಸಿ ಭಾಸ್ಕರ ಎಂಬವರು ಬದಿಯಡ್ಕ ಪೊಲೀಸರಿಗೆ ದೂರು ನೀಡಿದ್ದಾರೆ. ಇದರಂತೆ ಕೇಸು ದಾಖಲಿಸಿಕೊಂಡ ಪೊಲೀಸರು ಶೋಧ ಕಾರ್ಯಾಚರಣೆ ಆರಂಭಿಸಿದ್ದಾರೆ. ಇದಕ್ಕಾಗಿ ಸೈಬರ್ ಸೆಲ್‌ನ ಸಹಾಯವನ್ನು ಪಡೆಯುವುದಾಗಿ ಪೊಲೀಸರು ತಿಳಿಸಿದ್ದಾರೆ.