ಬದಿಯಡ್ಕ ನಿವಾಸಿ ಪತ್ನಿ ಮನೆ ಬಳಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಬದಿಯಡ್ಕ: ಗೋವಾದಲ್ಲಿ ಗುತ್ತಿಗೆ ಕೆಲಸ ನಿರ್ವಹಿಸುತ್ತಿದ್ದ ಬದಿಯಡ್ಕ ನಿವಾಸಿ ಪತ್ನಿ ಮನೆ ಸಮೀಪ ಮರದಲ್ಲಿ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಪಳ್ಳತ್ತಡ್ಕ ಚೊಟ್ಟೆತ್ತಡ್ಕದ ಚಂದ್ರನ್ (45) ಮೃತಪಟ್ಟ ವ್ಯಕ್ತಿ. ಇಂದು ಬೆಳಿಗ್ಗೆ ಚಟ್ಟಂಚಾಲ್ ಮಂಡಲಿಪ್ಪಾರ ಎಂಬಲ್ಲಿರುವ ಪತ್ನಿ ಮನೆ ಸಮೀಪ ಇವರ ಮೃತದೇಹ ಪತ್ತೆಯಾಗಿದೆ. ವಿಷಯ ತಿಳಿದು ಮೇಲ್ಪರಂಬ ಎಸ್‌ಐ ವಿ.ಕೆ. ಅನೀಶ್ ನೇತೃತ್ವದ ಪೊಲೀಸರು ಸ್ಥಳಕ್ಕೆ ತಲುಪಿ ಮೃತದೇಹದ ಮಹಜರು ನಡೆಸಿದ ಬಳಿಕ ಮರಣೋತ್ತರ ಪರೀಕ್ಷೆ ಗಾಗಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ.
ಚಂದ್ರನ್ ಹಾಗೂ ಮಂಡಲಿಪಾರದ ಪ್ರಸನ್ನ ೨೫ ವರ್ಷಗಳ ಹಿಂದೆ ಮದುವೆಯಾಗಿದ್ದರು. ಪ್ರಸನ್ನ ಈ ಹಿಂದೆ ೫ ವರ್ಷ ಬದಿಯಡ್ಕ ಪಂಚಾಯತ್ ಆಡಳಿತ ಸಮಿತಿಯಲ್ಲಿ ಕಾಂಗ್ರೆಸ್‌ನ ಸದಸ್ಯೆಯಾಗಿದ್ದರು. ಇವರು ೫ ವರ್ಷಗಳಿಂದ ಮಂಡಲಿಪ್ಪಾರದ ಸ್ವಂತ ಮನೆಯಲ್ಲಿದ್ದರು. ಮೃತರು ಪತ್ನಿ, ಮಕ್ಕಳಾದ ಶಿವಜಿತ್, ಶಿವಪ್ರಿಯ, ಶಿವಶ್ರೇಯ, ಸಹೋದರರಾದ ಕೃಷ್ಣನ್, ಕುಮಾರನ್, ಸಹೋದರಿ ಮೀನ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.