ಬಲ್ಕೀಸ್‌ಭಾನು ಪ್ರಕರಣ: ೧೧ ಅಪರಾಧಿಗಳ ಕ್ಷಮಾಧಾನ ರದ್ದುಗೊಳಿಸಿದ ಸುಪ್ರೀಂಕೋರ್ಟ್
ನವದೆಹಲಿ: ಬಲ್ಕೀಸ್‌ಭಾನು ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ೧೧ ಅಪರಾಧಿಗಳನ್ನು ಅಕಾಲಿಕವಾಗಿ ಬಿಡುಗಡೆಗೊಳಿಸಿದ್ದ ಗುಜರಾತ್ ಸರಕಾರದ ತೀರ್ಮಾನವನ್ನು ಸುಪ್ರೀಂಕೋರ್ಟ್ ರದ್ದುಪಡಿಸಿ ಇಂದು ಬೆಳಿಗ್ಗೆ ತೀರ್ಪು ನೀಡಿದೆ. ನ್ಯಾಯಮೂರ್ತಿಗಳಾದ ಟಿ.ವಿ. ನಾಗರತ್ನ ಮತ್ತು ಉಜ್ವಲ್ ಭುಯಾನ್ ಅವರನ್ನು ಒಳಗೊಂಡ
ಸುಪ್ರೀಂಕೋರ್ಟ್ ವಿಶೇಷ ಪೀಠ ಈ ತೀರ್ಪು ನೀಡಿದೆ. ಅಪರಾಧಿಗಳ ಬಿಡುಗಡೆಯ ಬಗ್ಗೆ ನಿರ್ಧರಿಸುವ ಹಕ್ಕು ಮಹಾರಾಷ್ಟ್ರ ಸರಕಾರಕ್ಕೆ ಇದೆಯೇ ಹೊರತು ಗುಜರಾತ್ ಸರಕಾರಕ್ಕಿಲ್ಲವೆಂದು ನ್ಯಾಯಾಲಯ ಹೇಳಿದೆ. ಈ ಅಪರಾಧವು ಗುಜರಾತ್‌ನಲ್ಲಿ ನಡೆದಿದ್ದರೂ ಅದರ ವಿಚಾರಣೆ ಮಹಾರಾಷ್ಟ್ರದಲ್ಲಿ ನಡೆದಿದೆ. ಆದ್ದರಿಂದ ನಿರ್ಧಾರ ತೆಗೆದುಕೊಳ್ಳುವ ಹಕ್ಕು ಮಹಾರಾಷ್ಟ್ರಕ್ಕೆ ಸೇರಿದ್ದಾಗಿದೆಯೆಂದು ನ್ಯಾಯಾಲಯ ಸ್ಪಷ್ಟಪಡಿಸಿದೆ. ಬಲ್ಕೀಸ್ ಭಾನು ಪ್ರಕರಣದ ಎಲ್ಲಾ ೧೧ ಅಪರಾಧಿಗಳನ್ನು ೨೦೨೨ ಅಗೋಸ್ತ್ ೧೫ರಂದು ಆಜಾದಿ ಕಾ ಅಮೃತ್ ಮಹೋತ್ಸವದಡಿಯಲ್ಲಿ ಗುಜರಾತ್ ಸರಕಾರ ಬಿಡುಗಡೆಮಾಡಿತ್ತು. ಅದನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿತ್ತು. ಅದನ್ನು ಪರಿಶೀಲಿಸಿ ನ್ಯಾಯಾಲಯ ಈ ತೀರ್ಪು ನೀಡಿದೆ.