ಬಸ್‌ಗಳಲ್ಲಿ ದಾಖಲೆಪತ್ರಗಳಿಲ್ಲದೆ ಸಾಗಿಸುತ್ತಿದ್ದ 6,80,600 ರೂ. ವಶ; ಓರ್ವ ಸೆರೆ
ಉಪ್ಪಳ: ಅಬಕಾರಿ ಅಧಿಕಾರಿಗಳು ನಡೆಸಿದ ವಾಹನ ತಪಾಸಣೆ ವೇಳೆ ಅನಧಿಕೃತವಾಗಿ ಸಾಗಿಸುತ್ತಿದ್ದ ೬,೮೦,೬೦೦ ರೂಪಾಯಿ ಪತ್ತೆಯಾಗಿದೆ. ಈ ಸಂಬಂಧ ಬದಿಯಡ್ಕ ಬಳಿಯ ಪಿಲಾಂಕಟ್ಟೆ ನಿವಾಸಿ ಮಣಿ ಪ್ರಶಾಂತ್ (27) ಎಂಬಾತನನ್ನು ಬಂಧಿಸಲಾಗಿದೆ. ನಿನ್ನೆ ಮಧ್ಯಾಹ್ನ ಮಂಜೇಶ್ವರ ಚೆಕ್‌ಪೋಸ್ಟ್‌ನಲ್ಲಿ ನಡೆಸಿದ ಕಾರ್ಯಾಚರಣೆ ವೇಳೆ ದಾಖಲೆ ಪತ್ರಗಳಿಲ್ಲದೆ ಸಾಗಿಸುತ್ತಿದ್ದ ಹಣಪತ್ತೆಯಾಗಿದೆ. ಕರ್ನಾಟಕದಿಂದ ಬರುತ್ತಿದ್ದ ಖಾಸಗಿ ಬಸ್‌ನ ಪ್ರಯಾಣಿಕನಾದ ಮಣಿ ಪ್ರಶಾಂತ್‌ನ ಬ್ಯಾಗ್ ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ. ವಶಪಡಿಸಿದ ಹಣ ಹಾಗೂ ಆರೋಪಿಯನ್ನು ಮಂಜೇಶ್ವರ ಪೊಲೀಸರಿಗೆ ಹಸ್ತಾಂತರಿಸಲಾಯಿತು. ಅಬಕಾರಿ ಚೆಕ್‌ಪೋಸ್ಟ್‌ನ ಇನ್ಸ್‌ಪೆಕ್ಟರ್ ಕೆ.ವಿ. ಸುನೀಶ್‌ರ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಪ್ರಿವೆಂಟಿವ್ ಆಫೀಸರ್ ಬಿ.ಎಸ್. ಮುಹಮ್ಮದ್ ಕಬೀರ್, ಸಿವಿಲ್ ಎಕ್ಸೈಸ್ ಆಫೀ ಸರ್‌ಗಳಾದ ಜಿ.ಎಸ್. ಲಿಜು, ಆರ್.ಕೆ. ಅರುಣ್ ಮನೊದಲಾದವರಿದ್ದರು.
ಕ್ರಿಸ್ಮಸ್ ಹಾಗೂ ಹೊಸ ವರ್ಷಾಚರಣೆ ಅಂಗವಾಗಿ ಮದ್ಯ, ಮಾದಕವಸ್ತು ಸಾಗಾಟ ತಡೆಯುವ ಅಂಗವಾಗಿ ಗಡಿ ಪ್ರದೇಶಗಳಲ್ಲಿ ಅಬಕಾರಿ ಅಧಿಕಾರಿಗಳು ತಪಾಸಣೆ ತೀವ್ರಗೊಳಿಸಿದ್ದಾರೆ.