ಬಸ್ನಲ್ಲಿ ಮಗುವನ್ನು ಮರೆತು ಮನೆಗೆ ಮರಳಿದ ದಂಪತಿ: ಪ್ರಯಾಣಿಕನ ಸಮಯಪ್ರಜ್ಞೆಯಿಂದ ಹೆತ್ತವರ ಮಡಿಲು ಸೇರಿದ ಮಗು
ಕುಂಬಳೆ: ರಾತ್ರಿ ಹೊತ್ತಿನಲ್ಲಿ ಮೂವರು ಮಕ್ಕಳೊಂದಿಗೆ ಬಸ್ನಲ್ಲಿ ಪ್ರಯಾಣಿಸಿದ ದಂಪತಿ ಒಂದು ಮಗುವನ್ನು ಮರೆತು ಬಸ್ನಲ್ಲಿ ಬಿಟ್ಟು ಇಳಿದು ಮನೆಗೆ ತೆರಳಿದ್ದು, ಕೊನೆಗೆ ಪ್ರಯಾಣಿಕನ ಸಮಯಪ್ರಜ್ಞೆಯಿಂದ ಮಗು ಹೆತ್ತವರ ಕೈ ಸೇರಿದ ಘಟನೆ ನಡೆದಿದೆ.ನಿನ್ನೆ ರಾತ್ರಿ ೭ ಗಂಟೆಗೆ ಉಪ್ಪಳದಿಂದ ದಂಪತಿ ಹಾಗೂ ಮೂವರು ಮಕ್ಕಳು ಬಸ್ಗೆ ಹತ್ತಿದ್ದಾರೆ. ಅವರು ಬಂದ್ಯೋಡು ಬಳಿಯ ಮುಟ್ಟಂಗೆ ಟಿಕೆಟ್ ಪಡೆದಿದ್ದರು. ಇದೇ ವೇಳೆ ಬಸ್ನಲ್ಲಿ ಪ್ರಯಾಣಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದುದರಿಂದ ಅವರಿಗೆ ಕುಳಿತುಕೊಳ್ಳಲು ಸೀಟು ಸಿಗಲಿಲ್ಲ. ಇದರಿಂದ ಒಂದು ಮಗುವನ್ನು ಸೀಟಿನಲ್ಲಿ ಕುಳಿತಿದ್ದ ಒಬ್ಬರಲ್ಲಿ ನೀಡಿದ್ದರು. ಬಸ್ ಬಂದ್ಯೋಡಿಗೆ ತಲುಪಿದಾಗ ಪತಿ ಒಂದು ಮಗುವಿನೊಂದಿಗೆ ಬಸ್ನಿಂದಿಳಿದಿದ್ದಾರೆ. ಅವರು ಅಲ್ಲಿ ಇಳಿದಿರುವುದು ತಿಳಿಯದ ಪತ್ನಿ ಹಾಗೂ ಒಂದು ಮಗು ಮುಟ್ಟಂನಲ್ಲಿ ಬಸ್ನಿಂದಿಳಿದಿದ್ದಾರೆ. ಇದೇ ವೇಳೆ ಸೀಟಿನಲ್ಲಿ ಕುಳಿತಿದ್ದ ಪ್ರಯಾಣಿಕನ ಕೈಯಲ್ಲಿದ್ದ ಮಗುವನ್ನು ದಂಪತಿ ಮರೆತುಬಿಟ್ಟಿದ್ದಾರೆ. ಬಸ್ ಕುಂಬಳೆಗೆ ತಲುಪಿದಾಗ ಮಗುವನ್ನೆತ್ತಿಕೊಂಡ ವ್ಯಕ್ತಿ ಇಳಿಯಲು ಸಿದ್ಧನಾದರೂ ಮಗುವಿನ ಹೆತ್ತವರನ್ನು ಕಾಣಲಿಲ್ಲ. ಇದರಿಂದ ಮಗುವನ್ನು ಯಾರಲ್ಲಿ ನೀಡಬೇಕೆಂದು ತಿಳಿಯದೆ ಪ್ರಯಾಣಿಕ ಗೊಂದಲಕ್ಕೀಡಾಗಿದ್ದಾರೆ. ಇದೇ ಸಂದರ್ಭದಲ್ಲಿ ಬೈಕ್ನಲ್ಲಿ ಇಬ್ಬರು ತಲುಪಿ ಮಗು ನಮ್ಮದೆಂದು ತಿಳಿಸಿದ್ದಾರೆ. ಆದರೆ ಅವರಿಗೆ ಮಗುವನ್ನು ಹಸ್ತಾಂತರಿಸಲು ಮುಂದಾಗದೆ ನೇರವಾಗಿ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಈ ವಿಷಯ ವೈರಲ್ ಆಗುತ್ತಿದ್ದಂತೆ ಮಗುವಿನ ತಂದೆ, ತಾಯಿ ಠಾಣೆಗೆ ತಲುಪಿದ್ದಾರೆ. ಬಳಿಕ ಅವರಿಗೆ ಮಗುವನ್ನು ಹಸ್ತಾಂತರಿಸುವು ದರೊಂದಿಗೆ ಗೊಂದಲಕ್ಕೆ ಪರಿಹಾರವುಂಟಾಯಿತು.