ಬಸ್ ನೌಕರ ಮನೆಯೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ
ಕುಂಬಳೆ: ಬಸ್ ನೌಕರನೋರ್ವ ಮನೆಯೊಳಗೆ ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಕುಂಬಳೆ ಮಾವಿನಕಟ್ಟೆಯಲ್ಲಿ ಸಂಭವಿಸಿದೆ.
ಮಾವಿನಕಟ್ಟೆ ನಿವಾಸಿ ಕೃಷ್ಣ ಚೆಟ್ಟಿಯಾರ್‌ರ ಪುತ್ರ ದಿನೇಶನ್ (48) ಎಂಬಿವರು ಮೃತಪಟ್ಟ ವ್ಯಕ್ತಿ. ಕೃಷ್ಣ ಚೆಟ್ಟಿಯಾರ್ ಅಸೌಖ್ಯ ಬಾಧಿಸಿ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಇದರಿಂದ ಮನೆಯವರು ಆಸ್ಪತ್ರೆಗೆ ತೆರಳಿದ್ದು, ಈ ವೇಳೆ ದಿನೇಶನ್ ಮಾತ್ರವೇ ಮನೆಯಲ್ಲಿದ್ದರೆನ್ನಲಾಗಿದೆ. ನಿನ್ನೆ ಸಂಜೆ ಸಹೋದರ ಮನೆಗೆ ತಲುಪಿ ನೋಡಿದಾಗ ಬಾಗಿಲು ಒಳಗಿನಿಂದ ಚಿಲಕ ಹಾಕಿತ್ತು. ಕರೆದರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಕಿಟಿಕಿ ಮೂಲಕ ನೋಡಿದಾಗ ದಿನೇಶನ್ ನೆಲದಲ್ಲಿ ಬಿದ್ದಿರುವುದು ಕಂಡು ಬಂದಿದೆ. ಈ ಬಗ್ಗೆ ಮಾಹಿತಿ ಲಭಿಸಿದ ಕುಂಬಳೆ ಪೊಲೀಸರು ತಲುಪಿ ಮನೆಯ ಬಾಗಿಲು ತೆರೆದು ನೋಡಿದಾಗ ದಿನೇಶನ್ ಮೃತಪಟ್ಟ ಸ್ಥಿತಿಯಲ್ಲಿ ಕಂಡು ಬಂದಿದ್ದಾರೆ. ಮೃತದೇಹದ ಬಳಿ ನೆಲದಲ್ಲಿ ರಕ್ತ ಹೆಪ್ಪುಗಟ್ಟಿದ ಸ್ಥಿತಿಯಲ್ಲಿತ್ತು. ಬಿದ್ದು ಗಾಯಗೊಂಡು ಸಾವು ಸಂಭವಿಸಿರಬಹು ದೆಂದು ಅಂದಾಜಿಸಲಾಗಿದೆ ಎನ್ನಲಾಗು ತ್ತಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಾಸರಗೋಡು ಜನರಲ್ ಆಸ್ಪತ್ರೆಗೆ ತಲುಪಿಸಲಾಗಿದೆ.
ಮರಣೋತ್ತರ ಪರೀಕ್ಷೆ ಬಳಿಕವೇ ಸಾವಿಗೆ ಕಾರಣ ತಿಳಿಯಬಹುದೆಂದು ಪೊಲೀಸರು ತಿಳಿಸಿದ್ದಾರೆ. ಮೃತರು ತಂದೆ, ತಾಯಿ ಲಕ್ಷ್ಮಿ, ಪತ್ನಿ ರಜಿನಿ, ಮಕ್ಕಳಾದ ಶ್ರೀಲಕ್ಷ್ಮಿ, ಧನೇಶ್, ಸಹೋದರರಾದ ಸುರೇಶ್, ರಾಜೇಶ್ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.