ಬಾಲಕಿಗೆ ಲೈಂಗಿಕ ಕಿರುಕುಳ: ಆರೋಪಿಗೆ ೯೭ ವರ್ಷ ಸಜೆ, ೮.೫ ಲಕ್ಷ ರೂ. ಜುಲ್ಮಾನೆ
ಕಾಸರಗೋಡು: ಬಾಲಕಿಗೆ ಮೂರು ವರ್ಷಗಳ ತನಕದ ಅವಧಿಯಲ್ಲಿ ಹಲವು ಬಾರಿ ಲೈಂಗಿಕ ಕಿರುಕುಳ ನೀಡಿದ ಪ್ರಕರಣದ ಆರೋಪಿ ಮಂಜೇಶ್ವರ, ಕುಂಜತ್ತೂರು ಉದ್ಯಾವರದ ಸಯ್ಯಿದ್ ಮೊಹ ಮ್ಮದ್ ಬಶೀರ್ (೪೧) ಎಂಬಾತನಿಗೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (ಪ್ರಥಮ)ದ ನ್ಯಾಯಾಧೀಶರಾದ ಎ. ಮನೋಜ್ ಪೋಕ್ಸೋ ಕಾನೂನು ಸೇರಿದಂತೆ ವಿವಿಧ ಸೆಕ್ಷನ್‌ಗಳ ಪ್ರಕಾರ ಒಟ್ಟು ೯೭ ವರ್ಷ ಕಠಿಣ ಸಜೆ ಮತ್ತು ೮.೫ ಲಕ್ಷ ರೂ. ಜುಲ್ಮಾನೆ ವಿಧಿಸಿ ತೀರ್ಪು ನೀಡಿದ್ದಾರೆ.
ಜುಲ್ಮಾನೆ ಮೊತ್ತವನ್ನು ಕಿರುಕು ಕ್ಕೊಳಗಾದ ಬಾಲಕಿಗೆ ನೀಡಬೇಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ. ಜುಲ್ಮಾನೆ ಪಾವತಿಸದಿದ್ದಲ್ಲಿ ಆರೋಪಿ ಎಂಟೂವರೆ ವರ್ಷ ಹೆಚ್ಚುವರಿ ಸಜೆ ಅನುಭವಿಸಬೇಕಾಗಿದೆ ಎಂದು, ಶಿಕ್ಷೆಯನ್ನು ಒಟ್ಟಿಗೆ ಅನುಭವಿಸಿದರೆ ಸಾಕೆಂದೂ ತೀರ್ಪಿನಲ್ಲಿ ತಿಳಿಸಲಾಗಿದೆ.
ವಿದೇಶದಲ್ಲಿ ದುಡಿಯುತ್ತಿದ್ದ ಆರೋಪಿ ಊರಿಗೆ ಹಿಂತಿರುಗುವ ವೇಳೆಗಳ ಅವಧಿಯಲ್ಲಿ ಬಾಲಕಿಗೆ ಹಲವು ಬಾರಿ ಕಿರುಕುಳ ನೀಡಿದ್ದನೆಂದು ಪೊಲೀಸ್ ಕೇಸಿನಲ್ಲಿ ತಿಳಿಸಲಾಗಿದೆ.
ಐಪಿಸಿಯ ವಿವಿಧ ಸೆಕ್ಷನ್‌ಗಳ ಹಾಗೂ ಪೋಕ್ಸೋ ಕಾನೂನಿನ ಪ್ರಕಾರ ಆರೋಪಿ ವಿರುದ್ಧ ಮಂಜೇಶ್ವರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಅಂದು ಮಂಜೇಶ್ವರ ಪೊಲೀಸ್ ಠಾಣೆಯ ಎಸ್‌ಐ ಆಗಿದ್ದ ಸುಭಾಷ್‌ಚಂದ್ರನ್ ಅವರು ಈ ಪ್ರಕರಣದ ಪ್ರಾಥಮಿಕ ತನಿಖೆ ನಡೆಸಿದ್ದರು. ನಂತರ ಅಂದು ಇದೇ ಠಾಣೆಯ ಇನ್ಸ್‌ಪೆಕ್ಟರ್ ಆಗಿದ್ದ ಇ. ಅನೂಪ್ ಕುಮಾರ್ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರೋಸಿಕ್ಯೂಷನ್ ಪರ ಸ್ಪೆಷಲ್ ಪ್ರೋಸಿಕ್ಯೂಟರ್ (ಪೋಕ್ಸೋ) ಪಿ.ಆರ್. ಪ್ರಕಾಶ್ ಅಮ್ಮಣ್ಮಾಯ ಅವರು ನ್ಯಾಯಾಲಯದಲ್ಲಿ ವಾದಿಸಿದ್ದರು.