ಬಾಲಕಿಯನ್ನು ಅಪಹರಿಸಿ ಲೈಂಗಿಕ ದೌರ್ಜನ್ಯ: ಆರೋಪಿಯೆಂದು ಸಂಶಯಿಸಲಾದ ಓರ್ವ ಕಸ್ಟಡಿಗೆ ವೈಜ್ಞಾನಿಕ ಪರಿಶೀಲನೆಗೆ ತನಿಖಾ ತಂಡ ಕ್ರಮ
ಕಾಸರಗೋಡು: ಮನೆಯೊಳಗೆ ನಿದ್ರಿಸುತ್ತಿದ್ದ ಬಾಲಕಿಯನ್ನು ಅಪಹರಿಸಿ ಕೊಂಡೊಯ್ದು ಲೈಂಗಿಕ ದೌರ್ಜನ್ಯಗೈದ ಬಳಿಕ ಆಕೆಯ ಬೆಂಡೋಲೆಗಳನ್ನು ಕಸಿದು ಪರಾರಿಯಾದ ಪ್ರಕರಣದಲ್ಲಿ ಓರ್ವನನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಬಾಲಕಿಯ ಊರಿನವನೇ ಆದ ೨೭ರ ಹರೆಯದ ಯುವಕ ಪೊಲೀಸರ ಕಸ್ಟಡಿಯಲ್ಲಿದ್ದಾನೆ. ಘಟನೆಯ ಪುರಾವೆಗಳು ಈ ವ್ಯಕ್ತಿಯನ್ನು ಸೂಚಿಸುತ್ತಿದ್ದರೂ ಈತ ತಪ್ಪೊಪ್ಪಿಕೊಂಡಿಲ್ಲವೆಂದು ಹೇಳಲಾಗುತ್ತಿದೆ. ಕೆಲವೇ ದಿನಗಳ ಹಿಂದೆ ದೌರ್ಜನ್ಯಕ್ಕೆಡೆಯಾದ ಬಾಲಕಿಯ ಮನೆ ಬಳಿಯ ಮನೆಯೊಂದಕ್ಕೆ ತಲುಪಿದ ಈ ಯುವಕ ಪಡನ್ನಕ್ಕಾಡ್‌ಗೆ ತೆರಳಲು ಹತ್ತಿರದ ದಾರಿ ಯಾವುದೆಂದು ಕೇಳಿದ್ದಾನೆಂದು ಹೇಳಲಾಗುತ್ತಿದೆ. ಬಾಲಕಿಯನ್ನು ಅಪಹರಿಸಿದ ಘಟನೆ ಬಳಿಕ ಮನೆಯವರಿಗೆ ಈ ವಿಷಯ ಗಮನಕ್ಕೆ ಬಂದಿದೆ. ಕೂಡಲೇ ಮನೆಯವರು ಈ ವಿಷಯವನ್ನು ಪೊಲೀಸರಿಗೆ ತಿಳಿಸಿದ್ದಾರೆ. ಅನಂತರ ನಡೆಸಿದ ತನಿಖೆಯಲ್ಲಿ ಯುವಕನನ್ನು ಕಸ್ಟಡಿಗೆ ತೆಗೆಯಲಾಗಿದೆ. ಈ ಯುವಕ ಗಾಂಜಾ ಸೇವನೆಯ ಚಟಕ್ಕೆ ಸಿಲುಕಿಕೊಂಡಾತ ನಾಗಿದ್ದಾನೆಂದೂ ತಿಳಿದು ಬಂದಿದೆ.
ಈ ತಿಂಗಳ ೯ರಂದು ಬಾಲಕಿಯ ಮನೆ ಬಳಿಯ ಮತ್ತೊಂದು ಮನೆಯಲ್ಲೂ ನಿದ್ರಿಸುತ್ತಿದ್ದ ಮಹಿಳೆಯ ಕುತ್ತಿಗೆಯಿಂದ ಮಾಲೆ ಕಸಿದು ಪರಾರಿಯಾದ ಘಟನೆ ನಡೆದಿತ್ತು. ಮುಂಭಾಗಗಳ ಬಾಗಿಲು ಮೂಲಕ ಒಳಗೆ ನುಗ್ಗಿದ ದುಷ್ಕರ್ಮಿ ಸರ ಎಗರಿಸಿದ ಬಳಿಕ ಅಡುಗೆ ಕೋಣೆ ಬಾಗಿಲು ಮೂಲಕ ಓಡಿ ಪರಾರಿಯಾಗಿದ್ದನು. ಆದರೆ ದುಷ್ಕರ್ಮಿ ಅಪಹರಿಸಿರುವುದು ನಕಲಿ ಚಿನ್ನವಾಗಿರುವುದರಿಂದ ಈ ಬಗ್ಗೆ ಪೊಲೀಸರಿಗೆ ದೂರು ನೀಡಿರಲಿಲ್ಲ. ಇದೇ ರೀತಿಯಲ್ಲಿ ಬಾಲಕಿಯ ಮನೆಯೊಳಗೆ ನುಗ್ಗಿ ಪರಾರಿಯಾಗಿದ್ದನು. ಮಾಲೆ ಎಗರಿಸಿದ ವ್ಯಕ್ತಿಯನ್ನು ಕೇಂದ್ರೀಕರಿಸಿ ನಡೆದ ತನಿಖೆಯಲ್ಲಿ ಬಾಲಕಿಯನ್ನು ಅಪಹರಿಸಿದ ಆರೋಪಿಯನ್ನು ಗುರುತು ಹಚ್ಚುವತ್ತ ಪರಿಸ್ಥಿತಿ ಸಾಗಿದೆ.
ಈತನ ವಿರುದ್ಧ ಇದೇ ರೀತಿಯ ಬೇರೊಂದು ಪ್ರಕರಣವೂ ಇದೆಯೆಂದು ಹೇಳಲಾಗುತ್ತಿದೆ. ಬಾಲಕಿಯ ದೇಹದಲ್ಲಿ ಪತ್ತೆಯಾದ ಕೆಲವು ಕುರುಹುಗಳ ಸ್ಯಾಂಪಲ್ ಸಂಗ್ರಹಿಸಿ ಡಿಎನ್‌ಎ ಟೆಸ್ಟ್ ನಡೆಸಲಿರುವ ಸಿದ್ಧತೆಯಲ್ಲಿ ತನಿಖಾ ತಂಡ ತೊಡಗಿದೆ.
ಬುಧವಾರ ಮುಂಜಾನೆ ೨.೩೦ರ ವೇಳೆ ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಯೊಂದಕ್ಕೆ ನುಗ್ಗಿದ ದುಷ್ಕರ್ಮಿ ಹತ್ತರ ಹರೆಯದ ಬಾಲಕಿಯನ್ನು ಅಪಹರಿಸಿಕೊಂ ಡೊಯ್ದು ಲೈಂಗಿಕ ದೌರ್ಜನ್ಯಗೈದಿದ್ದನು. ಡಿಐಜಿ ತೋಮ್ಸನ್ ಜೋಸ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪಿ.ಬಿ. ಜೋಯ್ ಎಂಬಿವರ ಮೇಲ್ನೋಟದಲ್ಲಿ ಡಿವೈಎಸ್ಪಿಗಳಾದ ಲತೀಫ್, ಪಿ. ಬಾಲಕೃಷ್ಣನ್ ನಾಯರ್, ಸಿ.ಕೆ. ಸುನಿಲ್ ಕುಮಾರ್, ಇನ್ಸ್‌ಪೆಕ್ಟರ್ ಎಂ.ಪಿ. ಅಸಾದ್ ಎಂಬವರ ನೇತೃತ್ವದಲ್ಲಿರುವ ಪ್ರತ್ಯೇಕ ತನಿಖಾ ತಂಡ ನಾಗರಿಕರ ಸಹಾಯದೊಂದಿಗೆ ಮೂರು ಕಿಲೋ ಮೀಟರ್ ವ್ಯಾಪ್ತಿಯ ಎಲ್ಲಾ ಸ್ಥಳಗಳಲ್ಲೂ ಶೋಧ ನಡೆಸಿ ಯುವಕನನ್ನು ಕಸ್ಟಡಿಗೆ ತೆಗೆಯಲಾಗಿದೆ.