ಬಿಎಂಎಸ್ ನೇತಾರ ನ್ಯಾಯವಾದಿ ಸುಹಾಸ್ ಕೊಲೆ ಪ್ರಕರಣ: ಸ್ಥಾನಕ್ಕೆ ರಾಜೀನಾಮೆ ನೀಡಿದ ಸ್ಪೆಷಲ್ ಪ್ರೋಸಿಕ್ಯೂಟರ್
ಕಾಸರಗೋಡು: 2008 ಎಪ್ರಿಲ್‌ನಲ್ಲಿ ಇಡೀ ಕಾಸರಗೋಡು ಜಿಲ್ಲೆಯನ್ನೇ ನಡುಗಿಸಿದ ಗಲಭೆಯ ವೇಳೆ ಕಾಸರಗೋಡು ತಾಲೂಕು ಕಚೇರಿ ಪರಿಸರ ನಿವಾಸಿ ಹಾಗೂ ಬಿಎಂಎಸ್ ಜಿಲ್ಲಾ ಉಪಾಧ್ಯಕ್ಷರೂ ಆಗಿದ್ದ ನ್ಯಾಯವಾದಿ ಪಿ. ಸುಹಾಸ್ (38)ರ ಕೊಲೆ ಪ್ರಕರಣದ ವಿಚಾರಣೆಗೆ ಸಂಬಂಧಿಸಿ ಸರಕಾರದ ಪರ ವಾದಿಸಲು ಸ್ಪೆಷಲ್ ಪ್ರೋಸಿಕ್ಯೂಟರ್‌ರನ್ನಾಗಿ ನೇಮಿಸಲಾಗಿದ್ದ ನ್ಯಾಯವಾದಿ ಜೋಸೆಫ್ ಥೋಮಸ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಆರೋಗ್ಯಪರ ಕಾರಣದ ಹಿನ್ನೆಲೆಯಲ್ಲಿ ಅವರು ತಮ್ಮ ಸ್ಪೆಷಲ್ ಪ್ರೋಸಿಕ್ಯೂಟರ್ ಸ್ಥಾನಕ್ಕೆ ರಾಜೀನಾಮೆ ನೀಡಿರುವುದಾಗಿ ಅವರ ಸಹೋದ್ಯೋಗಿಗಳು ತಿಳಿಸಿದ್ದಾರೆ. ಇದರಿಂದಾಗಿ ಈ ಪ್ರಕರಣದ ಪರ ವಾದಿಸಲು ಪಬ್ಲಿಕ್ ಪ್ರೋಸಿಕ್ಯೂಟರ್ ಕೆ. ಅಜಿತ್ ಕುಮಾರ್‌ರಿಗೆ ರಾಜ್ಯ ಗೃಹಖಾತೆ ನಿರ್ದೇಶ ನೀಡಿದೆ. ಇದೇ ಸಂದರ್ಭದಲ್ಲಿ ಈ ಕೊಲೆ ಪ್ರಕರಣದ ಪರ ವಾದಿಸಲು ನ್ಯಾಯವಾದಿ ಪಿ. ಪ್ರೇಮರಾಜನ್‌ರನ್ನು ನೇಮಿಸುವಂತೆ ಕೋರಿ ಸುಹಾಸ್‌ರ ತಾಯಿ ಪ್ರೇಮ ಅರ್ಜಿ ಸಲ್ಲಿಸಿದ್ದು, ಅದು ಈಗ ಸರಕಾರದ ಪರಿಶೀಲನೆಯಲ್ಲಿದೆ.
೨೦೦೮ ಎಪ್ರಿಲ್ ತಿಂಗಳಲ್ಲಿ ಕಾಸರಗೋಡು ನಗರದಲ್ಲಿ ನಡೆದ ಗಲಭೆಯಲ್ಲಿ ಒಟ್ಟು ನಾಲ್ಕು ಮಂದಿ ಕೊಲೆಗೈಯ್ಯಲ್ಪಟ್ಟಿದ್ದರು. ನ್ಯಾಯವಾದಿ ಸುಹಾಸ್ ನಗರದ ಕೋಟೆ ರಸ್ತೆ ಬಳಿಯಿರುವ ತಮ್ಮ ಕಚೇರಿಗೆಂದು 2008 ಎಪ್ರಿಲ್ 17ರಂದು ನಡೆದು ಹೋಗುತ್ತಿದ್ದ ವೇಳೆ ಮಾರಕಾಯುಧಗಳೊಂದಿಗೆ ಬಂದ ಅಕ್ರಮಿಗಳ ತಂಡವೊಂದು ಅವರ ಮೇಲೆರಗಿ ಇರಿದು ಗಂಭೀರ ಗಾಯಗೊಳಿಸಿತ್ತು. ಬಳಿಕ ಸುಹಾಸ್‌ರನ್ನು ಗಂಭೀರಾವಸ್ಥೆಯಲ್ಲಿ ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಸಾಗಿಸಿ ಉನ್ನತ ಮಟ್ಟದ ಚಿಕಿತ್ಸೆ ನೀಡಲಾಯಿತಾದರೂ ಅದು ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದರು.
ಮೊದಲು ಕಾಸರಗೋಡು ಪೊಲೀಸರು ಈ ಪ್ರಕರಣದ ತನಿಖೆ ನಡೆಸಿದ್ದರು. ನಂತರ ತನಿಖೆಯನ್ನು ಕ್ರೈಮ್‌ಬ್ರಾಂಚ್ ಪೊಲೀಸ್ ವಿಭಾಗಕ್ಕೆ ಹಸ್ತಾಂತರಿಸಲಾಗಿತ್ತು. ಅದರಂತೆ ಕ್ರೈಮ್ ಬ್ರಾಂಚ್ ಪೊಲೀಸರು ತನಿಖೆ ನಡೆಸಿ ಆರು ಮಂದಿ ಆರೋಪಿಗಳ ಮೇಲಿನ ಚಾರ್ಜ್‌ಶೀಟನ್ನು ತಲಶ್ಶೇರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಈ ಚಾರ್ಜ್‌ಶೀಟ್‌ನಲ್ಲಿ ವಿದ್ಯಾನಗರದ ಬಿ.ಎಂ. ರಫೀಕ್, ಕಾಸರಗೋಡು ಮಾರ್ಕೆಟ್ ರಸ್ತೆಯ ಎ.ಎ. ಅಬ್ದುಲ್ ರಹಿಮಾನ್, ಅಬ್ದುಲ್ ರಹಿಮಾನ್ ಅಲಿಯಾಸ್ ರಹೀಂ, ಕೂಡ್ಲು ಎರಿ ಯಾಲ್‌ನ ಕೆ.ಇ. ಶಫೀರ್, ಕಾಸರಗೋ ಡು ಎಂ.ಜಿ ರಸ್ತೆಯ ಅಹಮ್ಮದ್ ಶಿಹಾಬ್ ಮತ್ತು ನಗರದ ಕರಿಪ್ಪೊಡಿ ರಸ್ತೆಯ ಅಹಮ್ಮದ್ ಸಫ್ವಾನ್ ಎಂಬವರನ್ನು ಈ ಚಾರ್ಜ್‌ಶೀಟ್‌ನಲ್ಲಿ ಆರೋಪಿಗಳನ್ನಾಗಿ ಹೆಸರಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು ಏಳು ಮಂದಿ ಆರೋಪಿಗಳಿದ್ದು, ಅದರಲ್ಲಿ ಓರ್ವನನ್ನು ಇನ್ನೂ ಬಂಧಿಸಲು ಬಾಕಿಯಿದೆ. ಆತನ ನ್ನು ಕಂಡಲ್ಲಿ ಗುರುತು ಹಚ್ಚಬಹುದಾಗಿದೆ ಎಂದು ಚಾರ್ಜ್‌ಶೀಟ್‌ನಲ್ಲಿ ಕ್ರೈಮ್ ಬ್ರಾಂಚ್ ಪೊಲೀಸರು ತಿಳಿಸಿದ್ದು, ಅದನ್ನು ಪರಿಗಣಿಸಿದ ತಲಶ್ಶೇರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ ಆತನ ಪತ್ತೆಗಾಗಿರುವ ತನಿಖೆಯನ್ನು ಮುಂದುವರಿಸುವಂತೆ ನಿರ್ದೇಶ ನೀಡಿದೆ. ಇದು ನ್ಯಾಯವಾದಿಯನ್ನು ಕೊಲೆಗೈದ ಪ್ರಕರಣವಾಗಿರುವುದರಿಂದಾಗಿ ಅದರ ವಿಚಾರಣೆಯನ್ನು ಕಾಸರಗೋಡಿನ ಬದಲು ಬಳಿಕ ತಲಶ್ಶೇರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯಕ್ಕೆ ಹಸ್ತಾಂತರಿಸಲಾಗಿತ್ತು.