ಬಿಜೆಪಿ ನಂಟು: ಎಡರಂಗ ರಾಜ್ಯ ಸಂಚಾಲಕ ಸ್ಥಾನದಿಂದ ಇ.ಪಿ. ಜಯರಾಜನ್ಗೆ ಕೊಕ್
ತಿರವನಂತಪುರ: ಬಿಜೆಪಿ ಯೊಂದಿಗಿನ ನಂಟು ಹೆಸರಲ್ಲಿ ಸಿಪಿಎಂ ಕೇಂದ್ರ ಸಮಿತಿ ಸದಸ್ಯರಾಗಿರುವ ಇ.ಪಿ. ಜಯರಾಜನ್ರನ್ನು ಎಡರಂಗದ ರಾಜ್ಯ ಸಂಚಾಲಕ ಸ್ಥಾನದಿಂದ ಹೊರತುಪಡಿಸಲಾಗಿದೆ. ಇಂದು ಬೆಳಿಗ್ಗೆ ಸೇರಿದ ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸಭೆ ಈ ಕ್ರಮ ಕೈಗೊಂಡಿದೆ.
ಸಿಪಿಎಂ ರಾಜ್ಯ ಸೆಕ್ರೆಟರಿಯೇಟ್ ಸಭೆ ತಿರುವನಂತಪುರದಲ್ಲಿ ಇಂದು ಬೆಳಿಗ್ಗೆ ಆರಂಭಗೊಂಡಿರುವಂತೆಯೇ ಅದರಲ್ಲಿ ಭಾಗವಹಿಸದೆ ಇ.ಪಿ. ಜಯರಾಜನ್ ತಿರುವನಂತಪುರದಿಂದ ನೇರವಾಗಿ ಕಣ್ಣೂರಿನಲ್ಲಿರುವ ತಮ್ಮ ನಿವಾಸಕ್ಕೆ ತೆರಳಿದ್ದಾರೆ.
ಬಿಜೆಪಿಯ ಕೇರಳ ರಾಜ್ಯ ಪ್ರಭಾರಿ ಪ್ರಕಾಶ್ ಜಾವ್ದೇಕರ್ರೊಂದಿಗೆ ದಲ್ಲಾಳಿ ನಂದಕುಮಾರ್ ಎಂಬವರ ಜೊತೆ ಇ.ಪಿ. ಜಯರಾಜನ್ ಇತ್ತೀಚೆಗೆ ಚರ್ಚೆ ನಡೆಸಿದ್ದರು. ಇದರ ಬೆನ್ನಲ್ಲೇ ಜಯರಾಜನ್ ಬಿಜೆಪಿ ಸೇರಲಿದ್ದಾರೆ ಎಂಬ ರೀತಿಯ ಪ್ರಚಾರವೂ ಉಂಟಾಗಿತ್ತು. ಬಿಜೆಪಿ ನೇತಾರರೊಂದಿಗೆ ಜಯರಾಜನ್ ನಡೆಸಿದ ಚರ್ಚೆ ಭಾರೀ ವಿವಾದಕ್ಕೂ ದಾರಿ ಮಾಡಿಕೊಟ್ಟಿತ್ತು. ಜಯರಾಜನ್ ಬಿಜೆಪಿ ಸೇರುವ ಬಗ್ಗೆ ಮೂರು ಬಾರಿ ಚರ್ಚೆ ನಡೆಸಲಾಗಿತ್ತೆಂದು ಬಿಜೆಪಿ ನಾಯಕಿ ಶೋಭಾ ಸುರೇಂದ್ರನ್ ಕೂಡಾ ಅಂದು ಹೇಳಿದ್ದರು. ಆದರೆ ಪ್ರಕಾಶ್ ಜಾವ್ದೇಕರ್ ತನ್ನ ಮಗನ ಫ್ಲಾಟ್ಗೆ ಅವರಾಗಿಯೇ ಬಂದಿದ್ದರು. ಅಂದು ನನ್ನ ಪುತ್ರನ ಮಗನ ಹುಟ್ಟು ಹಬ್ಬವೂ ಆಗಿತ್ತು. ಅತಿಥಿ ಎಂಬಂತೆ ಪ್ರಕಾಶ್ ಜಾವ್ದೇಕರ್ರನ್ನು ನಾನು ಮನೆಗೆ ಸ್ವಾಗತಿಸಿದ್ದೆ. ಅಲ್ಲದೆ ಅವರೊಂದಿಗೆ ಯಾವುದೇ ರೀತಿಯ ರಾಜಕೀಯ ಚರ್ಚೆಯನ್ನು ನಡೆಸಿರಲಿಲ್ಲವೆಂದು ಅದಕ್ಕೆ ಜಯರಾಜನ್ ಬಳಿಕ ಸ್ಪಷ್ಟೀಕರಣ ನೀಡಿದ್ದರು. ಆದರೆ ಅದರಿಂದ ಸಂತೃಪ್ತಗೊಳ್ಳದ ಸಿಪಿಎಂ ರಾಜ್ಯ ಸಮಿತಿ ಮತ್ತು ರಾಜ್ಯ ಸೆಕ್ಟ್ರೆಟರಿಯೇಟ್ ಭಾರೀ ಆಕ್ರೋಶ ವ್ಯಕ್ತಪಡಿಸಿತ್ತು. ಮಾತ್ರವಲ್ಲ ಜಯರಾಜನ್ರ ನಿಲುವಿಗೆ ಸಿಪಿಎಂನ ಹಲವು ನೇತಾರರೂ ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇನ್ನೊಂದೆಡೆ ಮುಖ್ಯಮಂತ್ರಿ ಈ ವಿಷಯದಲ್ಲಿ ಜಯರಾಜನ್ರನ್ನು ತೀವ್ರ ತರಾಟೆಗೂ ತೆಗೆದುಕೊಂಡಿದ್ದರು. ಈ ವಿವಾದದ ಬೆನ್ನಲ್ಲೇ ನಿನ್ನೆ ಸೇರಿದ ಸಿಪಿಎಂ ಸೆಕ್ರೆಟರಿಯೇಟ್ ಸಭೆಯಲ್ಲೂ ಇ.ಪಿ. ಜಯರಾಜನ್ರ ಬಿಜೆಪಿ ನಂಟಿನ ವಿಷಯ ಮತ್ತೆ ಪ್ರಸ್ತಾಪಿಸಲ್ಪಟ್ಟಿತ್ತು. ಅದಾದ ಬೆನ್ನಲ್ಲೇ ಎಡರಂಗ ರಾಜ್ಯ ಸಂಚಾಲಕ ಸ್ಥಾನಕ್ಕೆ ರಾಜೀನಾಮೆ ನೀಡುವ ಇಂಗಿತವನ್ನು ಜಯರಾಜನ್ ವ್ಯಕ್ತಪಡಿಸಿದ್ದರು. ಸಿಪಿಎಂನ ರಾಜ್ಯ ಸೆಕ್ರೆಟರಿಯೇಟ್ ಇಂದು ಬೆಳಿಗ್ಗೆ ಮತ್ತೆ ಸಭೆ ಸೇರಿ ಎಡರಂಗ ರಾಜ್ಯ ಸಂಚಾಲಕ ಸ್ಥಾನದಿಂದ ಜಯರಾಜನ್ರನ್ನು ಹೊರತುಪಡಿಸುವ ತೀರ್ಮಾನ ಕೈಗೊಂಡಿದೆ. ತೆರವುಗೊಂಡ ಆ ಸ್ಥಾನಕ್ಕೆ ಟಿ.ಪಿ. ರಾಮಕೃಷ್ಣನ್ರನ್ನು ನೇಮಿಸುವ ಬಗ್ಗೆ ಸಿಪಿಎಂ ಪರಿಗಣಿಸಿದೆ.