ಬಿರುಮಳೆಗೆ ತತ್ತರಿಸಿದ ರಾಜಧಾನಿ: 7 ಸಾವು
ನವದೆಹಲಿ: ಬಿರುಗಾಳಿ, ಬಿರುಬೇಸಿಗೆಯಿಂದ ತತ್ತರಿಸಿದ ದೆಹಲಿಗೆ ನಿನ್ನೆ ಮುಂಗಾರುಮಳೆ ಪ್ರವೇಶಿಸಿದೆ. ಮೊದಲ ದಿನವೇ ೮೮ ವರ್ಷಗಳ ಬಳಿಕ ದಾಖಲೆಯ 23 ಸೆಂ.ಮಿ ಮಳೆಯಾಗಿದ್ದು, ಅದು ರಾಜಧಾನಿ ದಿಲ್ಲಿಯಲ್ಲಿ ಭಾರೀ ಪ್ರವಾಹ ಸೃಷ್ಟಿಸಿದೆ.
ದಿಲ್ಲಿಯ ಪ್ರಮುಖ ಭಾಗಗಳು ಹಾಗೂ ಹಲವು ಪ್ರದೇಶಗಳು ಜಲಾವೃತಗೊಂಡಿವೆ. 8 ಮತ್ತು 10 ವರ್ಷ ವಯಸ್ಸಿನ ಇಬ್ಬರು ಮಕ್ಕಳು ಸೇರಿದಂತೆ ಪ್ರತ್ಯೇಕ ಘಟನೆಯಲ್ಲಿ ಏಳು ಮಂದಿ ಸಾವನ್ನಪ್ಪಿದ್ದಾರೆ. ಕಾರಿನ ಮೇಲೆ ಮೇಲ್ಛಾವಣಿ ಕುಸಿದುಬಿದ್ದು ೪೫ ವರ್ಷದ ಕ್ಯಾಬ್ ಟ್ರೈವರ್ ಸಾವನ್ನಪ್ಪಿದ್ದಾರೆ. ವಸಂತವಿಹಾರ ಪ್ರದೇಶದಲ್ಲಿ ನಿರ್ಮಾಣ ಹಂತದಲ್ಲಿರುವ ಕಟ್ಟಡ ಭಾರೀ ಮಳೆಗೆ ಕುಸಿದುಬಿದ್ದು ಮೂವರು ಕಾರ್ಮಿಕರು ಮೃತಪಟಿ ದ್ದಾರೆ. ನ್ಯೂ-ಉಸ್ಮಾನ್‌ಪುರ ಪ್ರದೇಶದಲ್ಲಿ ೮ ಮತ್ತು 10 ವಯಸ್ಸಿನ ಇಬ್ಬರು ಮಕ್ಕಳು ಮಳೆ ನೀರಿನ ಹೊಂಡಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಹಲವಾರು ಮನೆಗಳಿಗೆ ನೀರು ನುಗ್ಗಿದೆ. ಹಲವು ವಾಹನಗಳು ನೀರಿನಲ್ಲಿ ಮುಳುಗಿವೆ. ಮಳೆಯಿಂ ದಾಗಿ ಟ್ರಾಫಿಕ್ ವ್ಯವಸ್ಥೆಯೂ ಹದಗೆಟ್ಟಿದೆ. ರಾಜಧಾನಿಯಲ್ಲಿ ಅತೀ ಹೆಚ್ಚು ಎಂಬಂತೆ 1936ರಲ್ಲಿ 235 ಮಿ.ಮೀ. ಮಳೆ ಸುರಿದಿತ್ತು. ಅದಾದ ನಂತರ ನಿನ್ನೆ ಎರಡನೇ ಅತೀ ಹೆಚ್ಚು 228.1 ಮಿ.ಮೀ ಮಳೆಯಾಗಿದೆ. ಜಡಿ ಮಳೆ ದಿಲ್ಲಿ ಜನತೆಯನ್ನು ತೀವ್ರ ಸಂಕಷ್ಟದಲ್ಲಿ ಸಿಲುಕುವಂತೆ ಮಾಡಿದೆ. ಎಲ್ಲೆಡೆ ಜಾಗ್ರತಾ ನಿರ್ದೇಶ ನೀಡಲಾಗಿದೆ.