ಉಪ್ಪಳ: ಭಾರೀ ಮಳೆ, ಗಾಳಿಗೆ ಮರಗಳು ಮುರಿದು ಬಿದ್ದು ವಿದ್ಯುತ್ ಕಂಬ ಹಾನಿಗೀಡಾಗಿ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ನಿನ್ನೆ ಸಂಜೆ ಮಂಗಲ್ಪಾಡಿಯ ಪ್ರತಾಪನಗರದಲ್ಲಿ ನಡೆದಿದೆ. ಪ್ರತಾಪ ನಗರದ ಪ್ರಧಾನ ರಸ್ತೆಯಲ್ಲಿ ಮರ ಪರಿಸರದ ವಿದ್ಯುತ್ ತಂತಿಗೆ ಹಾಗೂ ಸಮೀಪದ ದೇವದಾಸ್ ಶೆಟ್ಟಿ ಎಂಬವರ ಕ್ವಾರ್ಟರ್ಸ್ಗೆ ಮುರಿದು ಬಿದ್ದಿದೆ. ಇದರಿಂದ ಹೆಂಚು, ಪಕ್ಕಾಸು ಹಾನಿಗೊಂಡಿದೆ. ಅಲ್ಲದೆ ವಿದ್ಯುತ್ ತಂತಿ ಸಡಿಲಗೊಂಡು ನೆಲಕ್ಕೆ ಸ್ಪರ್ಶಿಸುವ ಹಂತಕ್ಕೆ ತಲುಪಿದ್ದು, ಇದನ್ನು ಅರಿತ ಸ್ಥಳೀಯ ಯುವಕರು ಕೂಡಲೇ ವಿದ್ಯುತ್ ಇಲಾಖೆಗೆ ತಿಳಿಸಿ ವಿದ್ಯುತ್ ಕಡಿಯಲಾಗಿದೆ. ಬಳಿಕ ವಿದ್ಯುತ್ ಸಿಬ್ಬಂದಿಗಳು ಹಾಗೂ ಊರಿನ ಯುವಕರು ಮರವನ್ನು ಕಡಿದು ತೆರವುಗೊಳಿಸಿ ವಾಹನ ಸಂಚಾರಕ್ಕೆ ದಾರಿ ಮಾಡಿಕೊಟ್ಟರು. ಇದಾದ ಕೆಲವೇ ನಿಮಿಷದಲ್ಲಿ ಇದೇ ಪರಿಸರದಲ್ಲಿ ಮತ್ತೊಂದು ಮರ ಬಿದ್ದಿದೆ. ಬೆಳಿಗ್ಗೆ ಇಲ್ಲಿನ ಒಳ ರಸ್ತೆಯಲ್ಲಿ ಮರವೊಂದು ಬಿದ್ದು ವಿದ್ಯುತ್ ಕಂಬ ಹಾನಿಗೊಂಡಿದೆ. ಸ್ಥಳೀಯ ಯುವಕರು ಹಾಗೂ ಉಪ್ಪಳ ವಿದ್ಯುತ್ ಕಚೇರಿ ಸಿಬ್ಬಂದಿಗಳು ನಡೆಸಿದ ಕಾರ್ಯಾಚರಣೆಯಿಂದ ಸಂಭವಿಸಬಹುದಾದ ಅಪಾಯ ತಪ್ಪಿದಿದೆ.
