ಬೀಗ ಜಡಿದ ಮನೆಯಿಂದ 15 ಪವನ್ ಚಿನ್ನ, 50,೦೦೦ ರೂ. ಕಳವು
ಕಾಸರಗೋಡು: ಬೀಗ ಜಡಿದ ಮನೆಗೆ ಕಳ್ಳರು ನುಗ್ಗಿ 15 ಪವನ್ ಚಿನ್ನ ಹಾಗೂ 5೦,೦೦೦ ರೂ. ನಗದು ಕಳವುಗೈದ ಘಟನೆ ಚೆಂಗಳದಲ್ಲಿ ನಡೆದಿದೆ. ಚೆಂಗಳ ನಾಲ್ಕನೇ ಮೈಲಿನ ಸತ್ತಾರ್ ಕೆ.ಎ. ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಇವರು ನಿನ್ನೆ ಮನೆಗೆ ಬೀಗ ಜಡಿದು ಸೂರ್ಲಿನಲ್ಲಿರುವ ತಮ್ಮನ ಮನೆಗೆ ಹೋಗಿದ್ದರು. ಸಂಜೆ ವೇಳೆ ಹಿಂದಿರುಗಿದಾಗಲಷ್ಟೇ ಮನೆಯಲ್ಲಿ ಕಳವು ನಡೆದ ವಿಷಯ ಗಮನಕ್ಕೆ ಬಂದಿದೆ. ಮನೆಯ ಎದುರಿನ ಬಾಗಿಲ ಬೀಗ ಮುರಿದು ಒಳನುಗ್ಗಿದ ಕಳ್ಳರು ಮನೆಯೊಳಗಿನ ಎಲ್ಲಾ ಕಪಾಟುಗಳನ್ನು ಒಡೆದು ಅದರಲ್ಲಿದ್ದ ಸಾಮಗ್ರಿಗಳನ್ನೆಲ್ಲಾ ಚೆಲ್ಲಾಪಿಲ್ಲಿಗೊಳಿಸಿದ್ದಾರೆ ಮಾತ್ರವಲ್ಲ ಒಂದು ಕಪಾಟ್‌ನಲ್ಲಿ 15 ಪವನ್ ಚಿನ್ನದೊಡವೆ ಹಾಗೂ ಮತ್ತೊಂದು ಕಪಾಟ್‌ನಲ್ಲಿದ್ದ 5೦,೦೦೦ ರೂ.ವನ್ನು ದೋಚಿ ಮನೆಯ ಹಿಂಬದಿ ಬಾಗಿಲಿನಿಂದ ಪರಾರಿಯಾಗಿದ್ದಾರೆ. ಈ ಬಗ್ಗೆ ಸತ್ತಾರ್ ನೀಡಿದ ದೂರಿನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ. ಬೆರಳಚ್ಚು ತಜ್ಞರು ಸ್ಥಳಕ್ಕೆ ಆಗಮಿಸಿ ಹಲವು ಬೆರಳಚ್ಚುಗಳನ್ನು ಸಂಗ್ರಹಿಸಿದ್ದಾರೆ.