ಬೀಡಿ ಉದ್ಯಮಿ ಮನೆಯಿಂದ 30 ಲಕ್ಷ ರೂ. ದರೋಡೆ : ಕೊಲ್ಲಂ ನಿವಾಸಿಯಾದ ಓರ್ವ ಆರೋಪಿ ಸೆರೆ; 5 ಮಂದಿಗಾಗಿ ಶೋಧ
ವಿಟ್ಲ: ಸಿಂಗಾರಿ ಬೀಡಿ ಮಾಲಕನಾದ ಬೋಳಂತೂರುನಾರ್ಶದ ಸುಲೈಮಾನ್ ಹಾಜಿಯವರ ಮನೆಗೆ ದಾಳಿ ನಡೆಸಿ 30 ಲಕ್ಷ ರೂಪಾಯಿ ದರೋಡೆ ಗೈದ ಪ್ರಕರಣದಲ್ಲಿ ಕೇರಳೀಯನಾದ ಓರ್ವ ಆರೋಪಿ ಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಕೊಲ್ಲಂ ಜಿಲ್ಲೆಯ ತೃಕ್ಕಡವೂರ್ ನಿವಾಸಿ ಅನಿಲ್ ಫೆರ್ನಾಂಡಿಸ್ (49) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ. ಈತನ ಕೈಯಿಂದ 5 ಲಕ್ಷ ರೂಪಾಯಿ ನಗದು ಹಾಗೂ ಕೃತ್ಯಕ್ಕೆ ಆರೋಪಿಗಳು ಬಳಸಿದ್ದ ಎರ್ಟಿಗ ಕಾರನ್ನು ಪೊಲೀಸರು ವಶಪಡಿಸಿದ್ದಾರೆ.
ಈ ತಿಂಗಳ 3ರಂದು ರಾತ್ರಿ ಸುಲೈಮಾನ್ ಹಾಜಿಯವರ ಮನೆಗೆ ನುಗ್ಗಿದ ಆರು ಮಂದಿ ತಂಡ ತಾವು ಇ.ಡಿ ಅಧಿಕಾರಿಗಳೆಂದು ತಿಳಿಸಿತ್ತು. ಬಳಿಕ ಮನೆಯೊಳಗೆ ಶೋಧ ನಡೆಸಿ ೩೦ ಲಕ್ಷ ರೂಪಯಿಗಳನ್ನು ದೋಚಿ ಪರಾರಿಯಾಗಿತ್ತು. ಈ ಬಗ್ಗೆ ಸುಲೈಮಾನ್ ಹಾಜಿ ನೀಡಿದ ದೂರಿನಂತೆ ವಿಟ್ಲ ಪೊಲೀಸರು ಕೇಸು ದಾಖಲಿಸಿ ಕ್ಷಿಪ್ರ ಕಾರ್ಯಾಚರಣೆಗೆ ಚಾಲನೆ ನೀಡಿದ್ದರು. ಪೊಲೀಸ್ ಅಧೀಕ್ಷಕ ಯತೀಶ್ ಎನ್. ಅವರ ಆದೇಶದಂತೆ ನಾಲ್ಕು ವಿಶೇಷ ತನಿಖಾ ತಂಡ ರಚಿಸಿ ಆರೋಪಿಗಳಿಗಾಗಿ ಶೋಧ ಆರಂಭಿಸಲಾಗಿತ್ತು. ದರೋಡೆ ಕೃತ್ಯದಲ್ಲಿ ಭಾಗಿಯಾದ ಇತರ ಐದು ಮಂದಿಯ ಪತ್ತೆಗಾಗಿ ಶೋಧ ನಡೆಯುತ್ತಿದೆಯೆಂದು ಪೊಲೀಸ್ ಮೂಲಗಳು ತಿಳಿಸಿವೆ.