ಬೆಂಗಳೂರು ಕಾಲ್ತುಳಿತ ದುರಂತ: ಆರ್‌ಸಿಬಿಯ ನಾಲ್ವರು ಆಯೋಜಕರ ಬಂಧನ

ಬೆಂಗಳೂರು: ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊನ್ನೆ ಐಪಿಎಲ್‌ನಲ್ಲಿ ಆರ್‌ಸಿಬಿಯ ಗೆಲುವಿನ ಸಂಭ್ರಮಾಚರಣೆ ವೇಳೆ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿ, 47ಕ್ಕೂ ಹೆಚ್ಚು ಮಂದಿ ಗಾಯಗೊಂಡ ದುರಂತ ಪ್ರಕರಣಕ್ಕೆ ಸಂಬಂಧಿಸಿ ಆರ್‌ಸಿಬಿಯ ನಾಲ್ವರು ಆಯೋಜಕರನ್ನು ಕಬ್ಬನ್‌ಪಾರ್ಕ್ ಪೊಲೀಸರು ಬಂಧಿಸಿ ದ್ದಾರೆ. ಆರ್‌ಸಿಬಿಯ ಆಯೋಜಕರಾದ  ನಿಖಿಲ್ ಸೋಸಲೆ, ಕಿರಣ್, ಸುನಿಲ್ ಮ್ಯಾಥ್ಯು ಮತ್ತು  ಸುಮಂತ್ ಎಂಬಿವರು ಬಂಧಿತರಾದವರು. ಕಬ್ಬನ್ ಪಾರ್ಕ್ ಪೊಲೀಸರು ಹಾಗೂ ಸಿಸಿಬಿ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆ ಯಲ್ಲಿ ಈ ನಾಲ್ವರು ಆರೋಪಿಗಳನ್ನು ಇಂದು ಮುಂಜಾನೆ 6.30ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಬಂಧಿಸಲಾಗಿದೆ.

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ  ಆರ್‌ಸಿಬಿ ಮೆನೇಜ್‌ಮೆಂಟ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ಇದರಲ್ಲಿ ಒಂದನೇ ಆರೋಪಿಯನ್ನಾಗಿ ಆರ್‌ಸಿಬಿ ಮೆನೇಜ್‌ಮೆಂಟ್, ಎರಡನೇ ಆರೋಪಿಯಾಗಿ ಡಿಎನ್‌ಎ ಈವೆಂಟ್ ಮೆನೇಜ್‌ಮೆಂಟ್ ಹಾಗೂ ಮೂರನೇ ಆರೋಪಿಯಾಗಿ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್‌ನ್ನು ಸೇರ್ಪಡೆಗೊಳಿಸಲಾಗಿದೆ. ಬಿಎನ್‌ಎಸ್ ಸೆಕ್ಷನ್ ೧೦೫, ೧೧೫ ಮತ್ತು ೧೧೮ರ ಅಡಿಯಲ್ಲಿ ಈ ಪ್ರಕರಣ ದಾಖಲಿಸಲಾಗಿದೆ. ಬೆಂಗಳೂರು ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿ ಕರ್ನಾಟಕ ಹೈಕೋರ್ಟ್ ಕೂಡಾ ಇನ್ನೊಂದೆಡೆ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಂಡಿದೆ. ಅದರ ವಿಚಾರಣೆ ಈಗ ನಡೆಯುತ್ತಿದೆ.

ಇದೇ ವೇಳೆ ಕಾಲ್ತುಳಿತ ಪ್ರಕರಣ ನಡೆದ ಬಳಿಕ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಶನ್‌ನ ಕಾರ್ಯದರ್ಶಿ ಶಂಕರ್ ಮತ್ತು ಕೋಶಾಧಿಕಾರಿ ಜಯರಾಮ್ ತಲೆಮರೆಸಿಕೊಂಡಿದ್ದು, ಅವರ ಪತ್ತೆಗಾಗಿ ಪೊಲೀಸರು ವ್ಯಾಪಕ ಶೋಧ ಆರಂಭಿಸಿದ್ದಾರೆ.

You cannot copy contents of this page