ಬೈಕ್ ಅಪಘಾತ: ಹಾವಿನ ಕಡಿತಕ್ಕೊಳಗಾದ ಮಧ್ಯವಯಸ್ಕ ಮೃತ್ಯು; ಸಂಬಂಧಿಕನಿಗೆ ಗಂಭೀರ ಗಾಯ
ಮುಳ್ಳೇರಿಯ: ಹಾವಿನ ಕಡಿತದಿಂದ ಗಂಭೀರ ಸ್ಥಿತಿಯಲ್ಲಿದ್ದ ಮಧ್ಯ ವಯಸ್ಕ ಬೈಕ್ ಅಪಘಾತಕ್ಕೀಡಾಗಿ ಮೃತಪಟ್ಟ ದಾರುಣ ಘಟನೆ ಸಂಭವಿಸಿದೆ. ಇದೇ ವೇಳೆ ಅಪಘಾತಕ್ಕೀಡಾದ ಬೈಕ್‌ನ ಸವಾರ ಗಂಭೀರಗಾಯಗೊಂಡಿದ್ದು, ಆತನನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.
ಬೆಳ್ಳೂರು ಬಳಿಯ ಅಡ್ವಳ ನಿವಾಸಿ ಕೃಷ್ಣನ್ (೫೫) ಎಂಬವರು ಮೃತಪಟ್ಟ ದುರ್ದೈವಿಯಾಗಿದ್ದಾರೆ. ಇವರ ಪತ್ನಿಯ ಸಹೋದರಿಯ ಪುತ್ರ ರಮೇಶನ್ ಎಂಬವರು ಗಾಯಗೊಂಡು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ ಸಂಜೆ ಮನೆ ಹಿತ್ತಿಲಿನಲ್ಲಿ ಮಡಲು ಕಡಿಯುತ್ತಿದ್ದಾಗ ಕೃಷ್ಣನ್‌ರಿಗೆ ಹಾವು ಕಚ್ಚಿದೆ. ಅಲ್ಪ ಹೊತ್ತಿನ ಬಳಿಕ ಅವರಿಗೆ ಅಸ್ವಸ್ಥತೆ ಉಂಟಾಗಿದೆ. ಇದರಿಂದ ಅವರನ್ನು ಮುಳ್ಳೇರಿಯದ ಆಸ್ಪತ್ರೆಗೆ ಸಾಗಿಸಲಾಗಿದೆ. ಬಳಿಕ ಗಂಭೀರ ಸ್ಥಿತಿಯಲ್ಲಿದ್ದುದರಿಂದ ತಜ್ಞ ಚಿಕಿತ್ಸೆ ನೀಡಬೇಕೆಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಪತ್ನಿಯ ಸಹೋದರಿಯ ಪುತ್ರ ರಮೇಶನ್ ಚಲಾಯಿಸುತ್ತಿದ್ದ ಬೈಕ್‌ನಲ್ಲಿ ಹತ್ತಿಸಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಕೋಟೂರು ಬಳಿಯ ನೆಕ್ರಂಪಾರೆಗೆ ತಲುಪಿದಾಗ ಬೈಕ್ ಅಪಘಾತ ಕ್ಕೀಡಾಗಿದೆ. ಬೇರೆ ಯಾವುದೇ ವಾಹನ ಢಿಕ್ಕಿ ಹೊಡೆದು ಅಪ ಘಾತವುಂಟಾಗಿರುವುದಾಗಿ ಹೇಳಲಾಗಿತ್ತು. ಆದರೆ ಘಟನೆ ಸ್ಥಳದ ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಅಂತಹ ಯಾವುದೇ ಸೂಚನೆಗಳು ಲಭಿಸಿಲ್ಲವೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಪಘಾತ ಸಂಭವಿಸಿದ ಕೂಡಲೇ ಆ ರಸ್ತೆಯಲ್ಲಿ ಆಗಮಿಸಿದ ಕಾರಡ್ಕ ಬ್ಲೋಕ್ ಪಂಚಾಯತ್ ಅಧ್ಯಕ್ಷ ಸಿಜಿ ಮ್ಯಾಥ್ಯೂರ ವಾಹನದಲ್ಲಿ ಹತ್ತಿಸಿ ಅವರಿಬ್ಬರನ್ನು ಆಸ್ಪತ್ರೆಗೆ ತಲುಪಿಸಲಾಗಿದೆ. ಆದರೆ ಅಷ್ಟರೊಳಗೆ ಕೃಷ್ಣನ್ ಮೃತಪಟ್ಟಿದ್ದಾರೆ.
ರಮೇಶನ್ ಗಂಭೀರ ಗಾಯಗೊಂಡಿ ರುವುದರಿಂದ ಅವರನ್ನು ಮಂಗಳೂ ರಿನ ಆಸ್ಪತ್ರೆಗೆ ಕೊಂಡೊಯ್ದು ದಾಖಲಿಸಲಾಗಿದೆ. ಆದೂರು ನಿವಾಸಿಯಾದ ಕೃಷ್ಣನ್ ಬೆಳ್ಳೂರು ಅಡ್ವಳದಿಂದ ವಿವಾಹವಾಗಿ ಬಳಿಕ ಅಲ್ಲಿ ವಾಸಿಸುತ್ತಿದ್ದರು. ಮೃತರು ಪತ್ನಿ ಸರೋಜಿನಿ, ಪುತ್ರ ಸೌರವ್‌ಕೃಷ್ಣ, ಸಹೋದರ-ಸಹೋದರಿಯರಾದ ಅಚ್ಯುತನ್, ಕುಮಾರನ್,ಶ್ರೀಧರನ್, ಸರೋಜಿನಿ, ಕಾರ್ತ್ಯಾಯಿನಿ, ಯಶೋಧ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ. ಘಟನೆ ಬಗ್ಗೆ ಆದೂರು ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡಿದ್ದಾರೆ.