ಬೈಕ್ ಢಿಕ್ಕಿ ಹೊಡೆದು ಮೈಕ್ ಆಪರೇಟರ್ ದಾರುಣ ಮೃತ್ಯು: ನಾಡಿನಲ್ಲಿ ಶೋಕಸಾಗರ
ಕುಂಬಳೆ: ಕುಂಬಳೆ ಪೇಟೆಯಲ್ಲಿ ಬೈಕ್ ಢಿಕ್ಕಿ ಹೊಡೆದು ಮಧ್ಯ ವಯಸ್ಕನಾದ ಮೈಕ್ ಆಪರೇಟರ್ ಸಾವಿಗೀಡಾದ ಘಟನೆ ನಾಡಿನಲ್ಲಿ ಶೋಕಸಾಗರ ಸೃಷ್ಟಿಸಿದೆ. ಅಂಗಡಿಮೊಗರು ಪೆರ್ಲಡ ನಿವಾಸಿ ಅಬ್ದುಲ್ಲ (೬೦) ಎಂಬವರು ಮೃತಪಟ್ಟ ದುರ್ದೈವಿ ಯಾಗಿದ್ದಾರೆ. ನಿನ್ನೆ ಸಂಜೆ ೫.೧೫ರ ವೇಳೆ ಈ ಘಟನೆ ನಡೆದಿದೆ. ಕುಂಬಳೆ ಪೇಟೆಯಲ್ಲಿ ನಡೆದು ಹೋಗುತ್ತಿದ್ದ ಅಬ್ದುಲ್ಲರಿಗೆ ಬೈಕ್ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರ ಗಾಯಗೊಂಡ ಅವರನ್ನು ಕೂಡಲೇ ಕುಂಬಳೆ ಜಿಲ್ಲಾ ಸಹಕಾರಿ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ. ಇದೇ ವೇಳೆ ಬೈಕ್‌ನ ಹಿಂಬದಿ ಸೀಟಿನಲ್ಲಿದ್ದ ಹದಿನೈದರ ಹರೆಯದ ಬಾಲಕ ಕೂಡಾ ಗಾಯಗೊಂಡಿದ್ದು, ಈತನನ್ನು ಜಿಲ್ಲಾ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿದೆ. ಮೃತ ಅಬ್ದುಲ್ಲ ಅವರು ಬದಿಯಡ್ಕ ಹಾಗೂ ನೀರ್ಚಾಲ್‌ನಲ್ಲಿರುವ ಲೈಟ್ ಹಾಗೂ ಸೌಂಡ್ಸ್‌ನ ಮೈಕ್ ಆಪರೇಟರ್ ಆಗಿದ್ದರು.
ಇವರ ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಇಂದು ಬೆಳಿಗ್ಗೆ ಪೆರ್ಲಡ ಜುಮಾ ಮಸೀದಿ ಪರಿಸರದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು. ಮೃತರು ಪತ್ನಿ ನಫೀಸ, ಮಕ್ಕಳಾದ ಶಂಸುದ್ದೀನ್, ಶಾಹುಲ್ ಹಮೀದ್, ಫೈಸಲ್, ಸಹೋದರ- ಸಹೋದರಿಯರಾದ ರಫೀಕ್, ಸಿದ್ದಿಕ್, ಉಮ್ಮರ್, ನಫೀಸ, ಆಯಿಶ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಇದೇ ವೇಳೆ ಅಪಘಾತಕ್ಕೆ ಸಂಬಂಧಿಸಿ ಬೈಕ್ ಚಲಾಯಿಸಿದ ವ್ಯಕ್ತಿ ವಿರುದ್ಧ ಮನಃಪೂರ್ವಕವಲ್ಲದ ನರಹತ್ಯೆ ವಿರುದ್ಧ ಕೇಸು ದಾಖಲಿಸಿ ಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.