ಬ್ಯಾಂಕ್ ಖಾತೆಗಳನ್ನು ಉಪಯೋಗಿಸಿ ವಂಚನೆ: ವಿದೇಶಕ್ಕೆ ಪರಾರಿಯಾಗಿದ್ದ ಮಹಿಳೆ ವಿಮಾನ ನಿಲ್ದಾಣದಿಂದ ಸೆರೆ
ಕಾಸರಗೋಡು: ಇತರ ಬ್ಯಾಂಕ್ ಖಾತೆಗಳನ್ನು ಉಪಯೋಗಿಸಿ ಸೈಬರ್ ವಂಚನೆ ನಡೆಸಿದ ಪ್ರಕರಣದಲ್ಲಿ ಆರೋಪಿಯಾಗಿ ಬಳಿಕ ವಿದೇಶಕ್ಕೆ ಪರಾರಿಯಾಗಿದ್ದ ಮಹಿಳೆಯನ್ನು ಮುಂಬೈ ವಿಮಾನ ನಿಲ್ದಾಣದಿಂದ ಕಾಸರಗೋಡು ಸೈಬರ್ ಪೊಲೀಸ್ ಕ್ರೈಮ್ ಇನ್ಸ್‌ಪೆಕ್ಟರ್ ಹೊಣೆಗಾರಿಕೆ ಹೊಂದಿರುವ ವಿದ್ಯಾನಗರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಯು.ಪಿ. ವಿಪಿನ್‌ರ ಮೇಲ್ನೋಟದಲ್ಲಿ ಎಸ್‌ಐ ಪ್ರೇಮರಾಜನ್‌ರ ನೇತೃತ್ವದ ಪೊಲೀಸರ ತಂಡ ಬಂಧಿಸಿದೆ.
ಕಾಸರಗೋಡು ತಳಂಗರೆ ನಿವಾಸಿ ಯು. ಸಾಜಿದಾ (34) ಬಂಧಿತಳಾದ ಮಹಿಳೆ. ೨೦೨೪ ಮಾರ್ಚ್ ತಿಂಗಳಿಂದ ಹಲವು ದಿನಗಳಲ್ಲಾಗಿ ಇತರ ಬ್ಯಾಂಕ್ ಖಾತೆ ಬಳಸಿ ಸೈಬರ್ ವಂಚನೆ ಮೂಲಕ ಹಣ ವಿನಿಮಯ ನಡೆಸಿದ ದೂರಿನಂತೆ ಆರೋಪಿ ವಿರುದ್ಧ ಸೈಬರ್ ಕ್ರೈಮ್ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು.
ಇತರರ ಬ್ಯಾಂಕ್ ಖಾತೆ ಮತ್ತು ಎಟಿಎಂ ಕಾರ್ಡ್ ಜೋಡಣೆ ನಡೆಸಿದ ಮೊಬೈಲ್ ಫೋನ್ ನಂಬ್ರಗಳನ್ನು ಉಪಯೋಗಿಸಿ ಆರೋಪಿ ಇಂತಹ ವಂಚನೆ ನಡೆಸಿದ್ದಳು. ಹಲವರ ಬ್ಯಾಂಕ್ ಖಾತೆಗಳನ್ನು ಉಪಯೋಗಿಸಿ ಇಂತಹ ವಂಚನೆ ನಡೆಸಲಾಗಿತ್ತೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದಕ್ಕೆ ಸಂಬಂಧಿಸಿ ಕೇಸು ದಾಖಲುಗೊಂಡಾಗ ಆರೋಪಿ ವಿದೇಶಕ್ಕೆ ಪರಾರಿಯಾಗಿದ್ದಳು. ಆ ಬಗ್ಗೆ ಮಾಹಿತಿ ಲಭಿಸಿದ ಸೈಬರ್ ಕ್ರೈಮ್ ಪೊಲೀಸರು ಆಕೆಯ ಪತ್ತೆಗಾಗಿ ಸರ್ಕ್ಯುಲರ್ ನೋಟೀಸ್ ಜ್ಯಾರಿಗೊಳಿಸಿದ್ದರು. ಆ ಮಧ್ಯೆ ಆರೋಪಿ ಊರಿಗೆ ಹಿಂತಿರುಗಲೆಂದು ವಿದೇಶದಿಂದ ಮುಂಬೈ ಅಂತಾರಾಷ್ಟ್ರೀ ಯ ವಿಮಾನ ನಿಲ್ದಾಣಕ್ಕೆ ಬಂದಿಳಿದಾಗ ಆಕೆಯನ್ನು ವಿಮಾನ ನಿಲ್ದಾಣ ಅಧಿಕಾರಿಗಳು ತಡೆದು ನಿಲ್ಲಿಸಿದ್ದರು. ಬಳಿಕ ಸೈಬರ್ ಕ್ರೈಮ್ ಪೊಲೀಸರು ಅಲ್ಲಿಂದ ಆಕೆಯನ್ನು ಬಂಧಿಸಿದ್ದಾರೆ. ಆಕೆಯನ್ನು ಬಂಧಿಸಿದ ಪೊಲೀಸರ ತಂಡದಲ್ಲಿ ದಿಲೀಶ್ ಮತ್ತು ಸಜ್ನಾ ಎಂಬೀ ಪೊಲೀಸ್ ಸಿಬ್ಬಂದಿಗಳೂ ಒಳಗೊಂಡಿದ್ದರು.