ಭಾರತದ ಉದ್ಯಮರಂಗದ ಹರಿಕಾರ ರತನ್ ಟಾಟಾ ವಿಧಿವಶ
ಮುಂಬಯಿ: ಭಾರತ ಕಂಡ ಶ್ರೇಷ್ಠ ಉದ್ಯಮಿ, ಮಹಾನ್ ವಾಣಿಜ್ಯ ಸಾಮ್ರಾಜ್ಯವನ್ನು ಆಳಿದ ಟಾಟಾ ಸನ್ಸ್ನ ಅಧ್ಯಕ್ಷ ರತನ್ ಟಾಟಾ ತಮ್ಮ 86ನೇ ವಯಸ್ಸಿನಲ್ಲಿ ನಿಧನರಾದರು. ಅನಾರೋಗ್ಯ ನಿಮಿತ್ತ ಎರಡು ದಿನಗಳ ಹಿಂದೆ ಅವರನ್ನು ಮುಂಬಯಿಯ ಬ್ರಿಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ದಾಖಲಿಸಲಾ ಗಿತ್ತು. ನಿನ್ನೆ ಸಂಜೆ ಅವರ ಆರೋಗ್ಯ ಸ್ಥಿತಿ ಗಂಭೀರಾವಸ್ಥೆಗೆ ತಲುಪಿದೆ. ಚಿಕಿತ್ಸೆಗೆ ಸ್ಪಂದಿಸದೆ ಅವರು ತಡರಾತ್ರಿ ಅಸುನೀಗಿ ದ್ದಾರೆಂದು ವೈದ್ಯರು ತಿಳಿಸಿದ್ದಾರೆ.
1991ರಲ್ಲಿ ಟಾಟಾ ಸನ್ಸ್ನ ಚೇರ್ಮೆನ್ ಆಗಿದ್ದ ರತನ್ ಟಾಟಾ 2012ರವರೆಗೂ ಆ ಹುದ್ದೆಯಲ್ಲಿದ್ದರು. ತಮ್ಮ ಮರಿಮುತ್ತಜ್ಜ ಸ್ಥಾಪನೆ ಮಾಡಿದ್ದ ಟಾಟಾ ಗ್ರೂಪನ್ನು ಅವರು ಇಡೀ ಭಾರತದಲ್ಲೇ ಮೇರುಮಟ್ಟಕ್ಕೇರಿಸಿದ್ದರು. 1996ರಲ್ಲಿ ಟಾಟಾ ಟೆಲಿಸರ್ವೀಸಸ್ ಕಂಪೆನಿ ಸ್ಥಾಪಿಸಿದ ಅವರು 2004ರಲ್ಲಿ ಟಾಟಾ ಕನ್ಸಲ್ಟೆನ್ಸಿ ಕಂಪೆನಿಯನ್ನು ಸಾರ್ವಜನಿಕರ ಪಾಲುದಾರ ಕಂಪೆನಿಯನ್ನಾಗಿಸಿದರು. 1937 ಡಿಸೆಂಬರ್ 28ರಂದು ಜನಿಸಿದ್ದ ರತನ್ ಟಾಟಾ 1991ರಿಂದ 2012ವರೆಗೆ ಟಾಟಾ ಗ್ರೂಪ್ನ ಅಧ್ಯಕ್ಷರಾಗಿದ್ದರು. ಈ ಸಮಯದಲ್ಲಿ ಅವರು ವ್ಯಾಪಾರ ವಲಯದಲ್ಲಿ ಅನೇಕ ದಾಖಲೆಗಳನ್ನು ಸ್ಥಾಪಿಸಿದ್ದಾರೆ.
ಟಾಟಾಗೆ 11 ವರ್ಷದ ಪ್ರಾಯದಲ್ಲೇ ಅವರ ತಂದೆ ನೇವಲ್ ಟಾಟಾ ಮತ್ತು ತಾಯಿ ಸೋನು ಟಾಟಾ ಬೇರ್ಪಟ್ಟಿದ್ದರು. ಅದರಿಂದಾಗಿ ಅಜ್ಜಿ ಲೇಡಿ ನವಾಜ್ ಬಾಯಿಯ ಆಶ್ರಯದಲ್ಲಿ ಅವರು ಬೆಳೆದರು.
150 ವರ್ಷಗಳ ಹಳೆಯದಾದ ಟಾಟಾ ಸಮೂಹವನ್ನು ಯಶಸ್ವಿಯಾಗಿ ಮುನ್ನಡೆಸಿದ ದಂತ ಕಥೆಯಾಗಿರುವ ರತನ್ ಟಾಟಾರ ನಿಧನಕ್ಕೆ ಸರಕಾರ ಮಹಾರಾಷ್ಟ್ರದಲ್ಲಿ ಇಂದು ಒಂದು ದಿನದ ಶೋಕಾಚರಣೆ ಘೋಷಿಸಿದೆ. ಸಕಲ ಸರಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲಾಗುವುದೆಂದು ಮುಖ್ಯಮಂತ್ರಿ ಶಿಂಧೆ ತಿಳಿಸಿದ್ದಾರೆ.
ದೇಶದ ಅತ್ಯಂತ ಹಳೆಯ ವ್ಯಾಪಾರ ಸಂಸ್ಥೆಗಳಲ್ಲಿ ಒಂದಾದ ಟಾಟಾ ಗ್ರೂಪನ್ನು ಮಹಾ ಎತ್ತರಕ್ಕೆ ಕೊಂಡೊಯ್ಯುವಲ್ಲಿ ರತನ್ ಟಾಟಾರ ಪಾತ್ರವೇ ಹಿರಿದಾಗಿತ್ತು. ಅವರು ಕೇವಲ ಉದ್ಯಮಿ ಮಾತ್ರವಲ್ಲ, ಉದಾತ್ತ ಹಾಗೂ ಓರ್ವ ಕೊಡುಗೈ ದಾನಿಯೂ ಆಗಿದ್ದರು. ಅವರು ದೇಶಕ್ಕೆ ಸದಾ ಆದರ್ಶ ಮತ್ತು ಸ್ಪೂರ್ತಿಯಾಗಿದ್ದರು. ತಮ್ಮ ಗುಂಪಿನ ಎಲ್ಲಾ ನೌಕರರನ್ನು ಅವರು ತಮ್ಮ ಕುಟುಂಬವೆAದೇ ಪರಿಗಣಿಸಿದ್ದರು. ಇವರು ಭಾರತದ ಉದ್ಯಮರಂಗದ ಹರಿಕಾರರಾಗಿದ್ದರು. ರತನ್ ಟಾಟಾರ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ವಿವಿಧ ಸ್ತರಗಳ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರಿಗೆ ಅಂತಿಮ ನಮನ ಸಲ್ಲಿಸಲು ಸಾರ್ವಜನಿಕ ಜನಪ್ರವಾಹವೇ ಹರಿದು ಬರತೊಡ ಗಿದೆ. ಸಾರ್ವಜನಿಕ ದರ್ಶನದ ಬಳಿಕ ರತನ್ ಟಾಟಾರ ಪಾರ್ಥಿವ ಶರೀರವನ್ನು ವಿಧಿವಿಧಾನಗಳೊಂದಿಗೆ ವರ್ಲಿ ಚಿತಾಗಾರದಲ್ಲಿ ಅಂತ್ಯಕ್ರಿಯೆ ನಡೆಸಲಾಗುವುದು.