ಭೀಕರ ರಸ್ತೆ ಅಪಘಾತ: ಕ್ಷೇತ್ರ ದರ್ಶನಕ್ಕೆ ತೆರಳಿದ್ದ ಹದಿಮೂರು ಮಂದಿ ಮೃತ್ಯು
ಹಾವರಿ: ರಾಜ್ಯದಲ್ಲಿ ಮಳೆ ಕಾರಣ ಜನ ಜೀವ ಕಳೆದುಕೊಳ್ಳುತ್ತಿರುವ ಘಟನೆಗಳು ಸಂಭವಿಸುತ್ತಿರುವಾಗಲೇ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಗುಂಡೇನಾ ಹಳ್ಳಿ ಬೆಂಗಳೂರು ಪುಣೆ ರಾಷ್ಟ್ರೀಯ ಹೆದ್ದಾರಿಯ ಕ್ರಾಸ್ ರಸ್ತೆಯಲ್ಲಿ ಇಂದು ಮುಂಜಾನೆ ನಡೆದಿದೆ. ಸವದತ್ತಿ ದೇವರ ದರ್ಶನ ನಡೆಸಿ ಊರಿಗೆ ಹಿಂತಿರುಗುತ್ತಿರುವವರು ಪ್ರಯಾಣಿಸುತ್ತಿದ್ದ ವಾಹನ ಈ ರೀತಿ ಅಪಘಾತಕ್ಕೀಡಾಗಿ ದುರ್ಘಟನೆ ಸಂಭವಿಸಿದೆ. ನಿಂತಿದ್ದ ಲಾರಿಗೆ ಹಿಂದಿನಿಂದ ಈ ತೀರ್ಥಾಟಕರು ಸಂಚರಿಸುತ್ತಿದ್ದ ಟಿ.ಟಿ. ವಾಹನ ಢಿಕ್ಕಿ ಹೊಡೆದು ಈ ದುರ್ಘಟನೆ ನಡೆದಿದೆ. ಮೃತರನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಹೊಳೆಕೊನ್ನೂರು ಎಮ್ಮೆ ಹಟ್ಟಿ ಗ್ರಾಮ ನಿವಾಸಿಗಳಾದ ಸುಭದ್ರಾ ಬಾಯಿ (೬೫), ಪರಶುರಾಮ (೪೫), ಭಾಗ್ಯ (40), ನಾಗೇಶ್ (50), ವಿಶಾಲಾಕ್ಷಿ (40), ಅರ್ಪಿತಾ (18), ಪುಣ್ಯ (40), ಮಂಜುಳ ಬಾಯಿ (62), ಆದರ್ಶ್ (23), ಮಾನಸ (24), ರೂಪಾ 40), ಮಂಜುಳಾ (50) ಎಂದು ಗುರುತಿಸಲಾಗಿದೆ.
ಈ ಅಪಘಾತದಲ್ಲಿ ಆರು ವರ್ಷದ ಮಗುವೊಂದು ಸಾವನ್ನಪ್ಪಿದ್ದು, ಹೆಸರು ಇನ್ನಷ್ಟೇ ಪತ್ತೆ ಆಗಬೇಕಾಗಿದೆ. ಇದರ ಹೊರತಾಗಿ ಟಿ.ಟಿ ವಾಹನದಲ್ಲಿದ್ದ ಅರ್ಪಿತಾ, ಅರುಣಾ, ಅನ್ನಪೂರ್ಣ- ಎನ್ನುವವರೂ ಗಾಯಗೊಂಡಿದ್ದಾರೆ.
ಇಂದು ಮುಂಜಾನೆ 4 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಅಪಘಾತಕ್ಕೀಡಾದ ಟಿ.ಟಿ ವಾಹನದಲ್ಲಿ ಒಟ್ಟು 17 ಮಂದಿ ಪ್ರಯಾಣ ಮಾಡುತ್ತಿದ್ದರು. ಗಾಯಗೊಂಡವರನ್ನು ಹಾವೇರಿ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.