ಮಂಗಲ್ಪಾಡಿ ಪಂ. ಲ್ಯಾಪ್‌ಟಾಪ್ ಹಂಚಿಕೆಯಲ್ಲಿ ಅವ್ಯವಹಾರ: ತನಿಖೆಗೆ ಬಿಜೆಪಿ ಆಗ್ರಹ
ಉಪ್ಪಳ: ಮಂಗಲ್ಪಾಡಿ ಪಂಚಾಯತ್‌ನ ೭, ೧೯ನೇ ವಾರ್ಡ್‌ನಲ್ಲಿನ ಮೂವರು ವಿದ್ಯಾರ್ಥಿಗಳ ಹೆಸರಲ್ಲಿ ನಕಲಿ ದಾಖಲೆ ಸೃಷ್ಟಿಸಿ ಲ್ಯಾಪ್‌ಟಾಪ್ ಪಡೆದು ವಂಚಿಸಿದ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಬಿಜೆಪಿ ಪಂ. ಸಮಿತಿ ಆಗ್ರಹಿಸಿದೆ. ಪಂಚಾಯತ್‌ನ ೨೦೨೨-೨೩ನೇ ವಾರ್ಷಿಕ ಯೋಜನೆಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಉನ್ನತ ಶಿಕ್ಷಣ ಕೈಗೊಳ್ಳುವ ವಿದ್ಯಾರ್ಥಿ ಗಳಿಗೆ ಲ್ಯಾಪ್‌ಟಾಪ್ ಹಂಚಿಕೆಯಲ್ಲಿ ವ್ಯಾಪಕ ಅವ್ಯವಹಾರ ನಡೆದಿದೆ ಎಂದು ಸೋಷ್ಯಲ್ ಆಡಿಟಿಂಗ್‌ನಿಂದ ತಿಳಿದು ಬಂದಿದೆ ಎಂದು ಬಿಜೆಪಿ ತಿಳಿಸಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ತರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಬಿಜೆಪಿ ಪಂ. ಸಮಿತಿ ಪದಾಧಿಕಾರಿಗಳಾದ ವಿಜಯ ಕುಮಾರ್ ರೈ, ವಸಂತ ಕುಮಾರ್ ಮಯ್ಯ, ಅನಿಲ್ ಕುಮಾರ್ ಕೆ.ಪಿ, ದಿನೇಶ್ ಮುಳಿಂಜ ಆಗ್ರಹಿಸಿದ್ದಾರೆ. ಇದೇ ಬೇಡಿಕೆ ಮುಂದಿಟ್ಟು ಜಿಲ್ಲಾಧಿಕಾರಿ, ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಗೂ ದೂರು ನೀಡಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.