ಮಂಗಳೂರು: ವಿದ್ಯುತ್ ತಂತಿ ಕಡಿದು ಬಿದ್ದು ರಿಕ್ಷಾ ಚಾಲಕರಿಬ್ಬರ ದಾರುಣ ಸಾವು
ಮಂಗಳೂರು: ಮಹಾಮಳೆಗೆ ವಿದ್ಯುತ್ ತಂತಿ ತುಂಡಾಗಿ ಆಟೋ ಚಾಲಕನ ಮೇಲೆ ಬಿದ್ದಿದ್ದು ಆತನನ್ನು ರಕ್ಷಿಸಲು ಹೋದ ಇನ್ನೋರ್ವ ಆಟೋಚಾಲಕನೂ ಸೇರಿ ಇಬ್ಬರೂ ವಿದ್ಯುತ್ ಶಾಕ್ ತಗಲಿ ಧಾರುಣವಾಗಿ ಸಾವನ್ನಪ್ಪಿದ ಘಟನೆ ಪಾಂಡೇಶ್ವರದಲ್ಲಿ ಇಂದು ಮುಂಜಾನೆ ಸಂಭವಿಸಿದೆ.
ಮೃತರನ್ನು ಉಪ್ಪಿನಂಗಡಿ ನಿವಾಸಿ ದೇವರಾಜ ಗೌಡ ಹಾಗೂ ಪುತ್ತೂರಿನ ರಾಜ್ ಎಂದು ಗುರುತಿಸಲಾಗಿದೆ. ಈ ಇಬ್ಬರು ಪಾಂಡೇಶ್ವರದ ರುಸಾರಿಯೋ ಚರ್ಚ್‌ನ ಹಿಂಬದಿಯ ಬಾಡಿಗೆ ಕೊಠಡಿಯಲ್ಲಿ ವಾಸಿಸುತ್ತಿದ್ದರು. ಇಂದು ಮುಂಜಾನೆ ಸುಮಾರು ೪.೩೦ರ ವೇಳೆ ಈ ಇಬ್ಬರು ರಿಕ್ಷಾ ಚಾಲಕರ ಪೈಕಿ ಓರ್ವರು ಹೊರಗೆ ನಿಲ್ಲಿಸಲಾಗಿದ್ದ ತನ್ನ ಆಟೋ ರಿಕ್ಷಾವನ್ನು ತೊಳೆಯುತ್ತಿದ್ದ ವೇಳೆ ಮೇಲಿಂದ ಹಾದು ಹೋಗುತ್ತಿದ್ದ ವಿದ್ಯುತ್ ತಂತಿ ತುಂಡಾಗಿ ಅವರ ಮೇಲೆ ಬಿದ್ದಿದೆ. ಇದನ್ನು ಕಂಡ ಇನ್ನೋರ್ವ ಚಾಲಕ ಅವರನ್ನು ರಕ್ಷಿಸಲೆಂದು ದಾವಿಸಿದಾಗ ಅವರಿಗೂ ವಿದ್ಯುತ್ ಶಾಕ್ ತಗಲಿ ಇಬ್ಬರೂ ಅಲ್ಲೇ ಸಾವನ್ನಪ್ಪಿದ್ದಾರೆ.
ಪಾಂಡೇಶ್ವರ ಪೊಲೀಸರು ಸ್ಥಳಕ್ಕಾಗಮಿಸಿ ಮಹಜರು ನಡೆಸಿದ ಬಳಿಕ ಮೃತದೇಹಗಳನ್ನು ಮಂಗಳೂರು ವೆನ್‌ಲಾಕ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಗಿದೆ.