ಮಂಜಕ್ಕಲ್‌ನಿಂದ ಪೊಲೀಸರು ವಶಪಡಿಸಿದ್ದು ಬೆಂಗಳೂರಿನಿಂದ ತರಲಾದ ಎಂಡಿಎಂಎ : ಉಪಯೋಗಿಸಿದ್ದು ಬಾಡಿಗೆ ಕಾರು
ಬೋವಿಕ್ಕಾನ: ಬೋವಿಕ್ಕಾನ ಕುತ್ತಿಕ್ಕೋಲು ರಸ್ತೆ ಬಳಿಯ ಮಂಜಕ್ಕಲ್‌ನಿಂದ ಆದೂರು ಪೊಲೀಸರು ನಿನ್ನೆ ಮುಂಜಾನೆ ವಶಪಡಿಸಿರುವ ಮಾದಕ ದ್ರವ್ಯವಾದ 100 ಗ್ರಾಂ ಎಂಡಿಎಂಎಯನ್ನು ಆರೋ ಪಿಗಳು ಬೆಂಗಳೂರಿನಿಂದ ಸಾಗಿಸಿದ್ದರೆಂದು ತನಿಖೆಯಲ್ಲಿ ಸ್ಪಷ್ಟಗೊಂಡಿದೆಯೆಂದು ಪೊಲೀಸರು ತಿಳಿಸಿದ್ದಾರೆ.
ಈ ಮಾಲು ಸಾಗಿಸಲು ಆರೋಪಿಗಳು ಬಾಡಿಗೆ ಕಾರನ್ನು ಬಳಸಿದ್ದರು. ಅದನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಕಾರು ಚೆಮ್ನಾಡ್ ನಿವಾಸಿ ಯೋರ್ವರ ಮಾಲಕತ್ವದಲ್ಲಿದೆ. ಆದ್ದರಿಂದ ಕಾರು ಮಾಲಕನನ್ನು ವಿಚಾರಣೆಗೊಳಪ ಡಿಸಲು ಪೊಲೀಸರು ತೀರ್ಮಾನಿಸಿದ್ದಾರೆ.
ಈ ಎಂಡಿಎಂಎ ಸಾಗಾಟಕ್ಕೆ ಸಂಬಂಧಿಸಿ ಕಾಸರಗೋಡು ಕೋಟೆಕಣಿಯಲ್ಲಿನ ಕ್ವಾರ್ಟರ್ಸ್ ವೊಂದರಲ್ಲಿ ವಾಸಿಸುತ್ತಿರುವ ಪಿ.ಎಂ. ಶಾನವಾಸ್ (42), ಆತನ ಪತ್ನಿ ಶೆರೀಫ (40), ಶಾನವಾಸ್‌ನ ಸಹೋದರಿ ಚಟ್ಟಂಚಾಲ್‌ನ ಎಂ.ಎಫ್. ಮಂಜಿಲ್‌ನ ಪಿ.ಎಂ. ಶುಹೈಬ (35) ಮತ್ತು ಮುಳಿಯಾರು ಮಾಸ್ತಿಕುಂಡಿನ ಎಂ.ಕೆ. ಮುಹಮ್ಮದ್ ಸಹದ್(26) ಎಂಬವರನ್ನು ಪೊಲೀಸರು ಬಂಧಿಸಿ ಅವರ ವಿರುದ್ಧ ಪ್ರಕರಣ ದಾಖಲಿಸಿ ಕೊಂಡಿದ್ದಾರೆ. ವಶಪಡಿಸಲಾದ ಮಾದಕದ್ರವ್ಯಕ್ಕೆ ಸುಮಾರು ನಾಲ್ಕು ಲಕ್ಷ ರೂ. ಮೌಲ್ಯವಿದೆಯೆಂದು ಪೊಲೀಸರು ತಿಳಿಸಿದ್ದಾರೆ.ಆದೂರು ಪೊಲೀಸ್ ಠಾಣೆಯ ಎಸ್‌ಐ ಕೆ. ವಿನೋದ್ ಕುಮಾರ್ ನೇತೃತ್ವದ ಪೊಲೀಸರು ಈ ಕಾರ್ಯಾಚರಣೆ ನಡೆಸಿದ್ದರು.