ಮಂಜೇಶ್ವರದಲ್ಲಿ ಮನೆಯಿಂದ 10 ಲಕ್ಷ ರೂ.ಗಳ ವಜ್ರಾಭರಣ, ಬೆಂಡೋಲೆ ಕಳವು: ಮನೆ ಕೆಲಸದಾಳು ಯುವತಿ ಕಸ್ಟಡಿಗೆ
ಉಪ್ಪಳ: ಕೆಲಸಕ್ಕೆ ನಿಂತ ಮನೆಯಿಂದ 10 ಲಕ್ಷ ರೂಪಾಯಿ ಮೌಲ್ಯವುಳ್ಳ ವಜ್ರಾಭರಣಗಳು ಹಾಗೂ ಎರಡು ಬೆಂಡೋಲೆಗಳನ್ನು ಕಳವು ನಡೆಸಿದ ಯುವತಿಯನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ಉತ್ತರ ಪ್ರದೇಶ ನಿವಾಸಿಯೂ, ಉಪ್ಪಳದಲ್ಲಿ ವಾಸಿಸುವ ಆಸಿಯ ಎಂಬಾಕೆಯನ್ನು ಮಂಜೇಶ್ವರ ಪೊಲೀಸರು ಕಸ್ಟಡಿಗೆ ತೆಗೆದು ತನಿಖೆ ನಡೆಸುತ್ತಿದ್ದಾರೆ. ಕಾಸರಗೋಡು ಮಹಿಳಾ ಪೊಲೀಸ್ ಠಾಣೆಗೆ ತಲುಪಿಸಿ ರುವ ಆರೋಪಿಯನ್ನು ಸಮಗ್ರವಾಗಿ ತನಿಖೆಗೊಳಪಡಿಸಿದ ಬಳಿಕವೇ ಬಂಧನ ದಾಖಲಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮಂಜೇಶ್ವರ ರಾಷ್ಟ್ರೀಯ ಹೆದ್ದಾರಿ ಸಮೀಪ ಕಣಚ್ಚೂರ್ ವಿಲ್ಲಾದ ಫಾತಿಮತ್ ಸಫಾನ ಎಂಬವರ ಮನೆಯಲ್ಲಿ ಕಳವು ನಡೆದಿದೆ. ಈ ಮನೆ ಯಲ್ಲಿ ಆಸಿಯ ಕೆಲಸಕ್ಕೆ ನಿಂತಿದ್ದಳು. ದೂರುದಾತೆಯ ತಾಯಿಯ ಮನೆಯಲ್ಲಿ ಇರಿಸಲಾಗಿದ್ದ ಆಭರಣಗಳು ಫೆಬ್ರವರಿ 18ರಂದು ಕಳವಿಗೀಡಾಗಿತ್ತು. ಕಳವಿಗೆ ಸಂಬಂಧಿಸಿ ಪೊಲೀಸರಿಗೆ ದೂರು ನೀಡುವುದರೊಂದಿಗೆ ಊರಿಗೆ ತೆರಳಲು ಪ್ರಯತ್ನಿಸುತ್ತಿದ್ದ ವೇಳೆ ಆಸಿಯಳನ್ನು ಪೊಲೀಸರು ಕಸ್ಟಡಿಗೆ ತೆಗೆದುಕೊಂಡಿದ್ದಾರೆ.