ಮಂಜೇಶ್ವರ ಠಾಣೆ ಪರಿಸರದಲ್ಲಿ ತುಕ್ಕು ಹಿಡಿದು ನಾಶವಾಗುವ ವಾಹನಗಳು: ವಾರೀಸುದಾರರಿಗೆ ನೀಡಲು ಕಾನೂನು ಕ್ರಮ ತೊಡಕು
ಉಪ್ಪಳ: ಮಂಜೇಶ್ವರ ಪೊಲೀಸ್ ಠಾಣೆ ಪರಿಸರದಲ್ಲಿ ತಂದು ನಿಲ್ಲಿಸಿರುವ ನೂರಾರು ವಾಹನಗಳು ತುಕ್ಕು ಹಿಡಿದು ನಾಶಗೊಳ್ಳುತ್ತಿದ್ದು, ಇದರಲ್ಲಿ ಸುಮಾರು 10 ವರ್ಷದ ಹಿಂದಿನ ವಾಹನಗಳು ಒಳಗೊಂಡಿದೆ. ಠಾಣೆಯ ಸುತ್ತಮುತ್ತ ವಾಹನಗಳನ್ನು ನಿಲ್ಲಿಸಲಾಗಿದೆ. ಅನಧಿಕೃತ ಮದ ಸಾಗಾಟ, ಮರಳು ಸಾಗಾಟ, ಅಪಘಾತವಾದ ವಾಹನಗಳು, ದಾಖಲೆಪತ್ರಗಳಿಲ್ಲದೆ ಸಂಚರಿಸಿದ ವಾಹನಗಳು ಇದರಲ್ಲಿ ಒಳಗೊಂಡಿವೆ.
ಕಾರು, ಆಟೋರಿಕ್ಷಾ, ಟೆಂಪೋ, ಲಾರಿ, ಬೈಕ್ ಸಹಿತ ಹಲವು ವಾಹನಗಳು ಇಲ್ಲಿ ಕಂಡು ಬರುತ್ತಿದೆ. ಇದರಲ್ಲಿ ಕೆಲವೊಂದು ಬಿಸಿಲು ಮಳೆಗೆ ತುಕ್ಕು ಹಿಡಿದು ನಾಶವಾಗುತ್ತಿದೆ. ಸುತ್ತುಮುತ್ತು ಕಾಡುಪೊದೆಗಳಾವರಿಸಿದ್ದು, ಇದರಲ್ಲಿ ವಿಷಜಂತುಗಳ ಸಹಿತ ಕಾಡು ಪ್ರಾಣಿ ಗಳು ಇರಬಹುದೆಂದು ಶಂಕಿಸಲಾಗಿದೆ. ವಾಹನಗಳ ವಿಲೇ ವಾರಿಗೆ ಕಾನೂನು ಕ್ರಮಗಳಲ್ಲಿ ಉಂಟಾ ಗುತ್ತಿರುವ ವಿಳಂಬ ಕಾರಣವೆನ್ನಲಾಗಿದೆ.
ಕೆಲವು ವಾಹನಗಳನ್ನು ಕಾನೂನು ಅನುಸಾರ ವಾರೀಸು ದಾರರಿಗೆ ಬಿಟ್ಟು ಕೊಟ್ಟಿರುವುದಾ ಗಿಯೂ ಪೊಲೀಸ್ ಠಾಣೆಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಇನ್ನೂ ಹಲವಾರು ವಾಹನಗಳು ಇಲ್ಲೇ ಇದ್ದು, ನಾಶವಾಗುತ್ತಿವೆ. ಈ ವಾಹನಗಳ ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿಗಳು ಮುಂದಾದರೆ ಅಪಾರ ಪ್ರಮಾಣದಲ್ಲಿ ಉಂಟಾಗುತ್ತಿರುವ ನಷ್ಟವನ್ನು ಇಲ್ಲದಂತೆ ಮಾಡಬಹುದೆಂದು ಸ್ಥಳೀಯರು ಅಂದಾಜಿಸಿದ್ದಾರೆ.