ಮಂಜೇಶ್ವರ ಪೊಲೀಸರ ಆಕ್ರಮಣ ಪ್ರಕರಣದಲ್ಲಿ ಕೊಲ್ಲಿಗೆ ಪರಾರಿಯಾದ ಆರೋಪಿಯ ಪತ್ತೆಗಾಗಿ ಲುಕ್‌ಔಟ್ ನೋಟೀಸ್ ಸಿದ್ಧ
ಮಂಜೇಶ್ವರ: ರಾತ್ರಿ ಕಾಲ ಪಟ್ರೋಲಿಂಗ್ ಮಧ್ಯೆ ಮಂಜೇಶ್ವರ ಎಸ್‌ಐ ಹಾಗೂ ಪೊಲೀಸರನ್ನು ಆಕ್ರಮಿಸಿದ ಪ್ರಕರಣದಲ್ಲಿ ಪ್ರಥಮ ಆರೋಪಿಯಾದ ಬಳಿಕ ಕೊಲ್ಲಿಗೆ ಪರಾರಿಯಾದ ಯುವಕನಿಗಾಗಿ ಪೊಲೀಸರು ಲುಕ್‌ಔಟ್ ನೋಟೀಸು ಸಿದ್ಧಪಡಿಸಿದ್ದಾರೆ. ಈ ವರದಿಯನ್ನು ಕೂಡಲೇ ಇಂಟರ್‌ಪೋಲ್‌ಗೆ ಹಸ್ತಾಂತರಿಸಲಾಗುವುದು. ಉಪ್ಪಳ ನಿವಾಸಿಯಾದ ರಶೀದ್ ಕೊಲ್ಲಿಗೆ ಪರಾರಿಯಾದ ವ್ಯಕ್ತಿ.
ಕಳೆದ ಆದಿತ್ಯವಾರ ಮುಂಜಾನೆ ಉಪ್ಪಳ ಹಿದಾಯತ್ ನಗರದಲ್ಲಿ ಮಂಜೇಶ್ವರ ಎಸ್‌ಐ ಪಿ. ಅನೂಬ್ ಹಾಗೂ ಸಿವಿಲ್ ಪೊಲೀಸ್ ಆಫೀಸರ್ ಕಿಶೋರ್‌ರ ವಿರುದ್ಧ ಆಕ್ರಮಣ ನಡೆಸಲಾಗಿತ್ತು. ಈ ವೇಳೆ ಗುಂಪುಗೂಡಿ ನಿಂತವರಲ್ಲಿ ಅಲ್ಲಿಂದ ತೆರಳಲು ತಿಳಿಸಿದಾಗ ಆಕ್ರಮಣ ನಡೆಸಲಾಗಿದೆ. ಘಟನೆಯಲ್ಲಿ ರಶೀದ್, ಅಫ್ಸಲ್ ಎಂಬಿವರು ಸಹಿತ ಗುರುತುಪತ್ತೆಹಚ್ಚಬಹುದಾದ ೫ ಮಂದಿ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿದ್ದಾರೆ. ೫ನೇ ಆರೋಪಿಯಾದ ಜಿಲ್ಲಾ ಪಂಚಾಯತ್ ಸದಸ್ಯ, ಮುಸ್ಲಿಂ ಯೂತ್ ಲೀಗ್ ಜಿಲ್ಲಾ ಜೊತೆ ಕಾರ್ಯದರ್ಶಿಯಾದ ಗೋಲ್ಡನ್ ಅಬ್ದುಲ್ ರಹ್ಮಾನ್ ಮಾತ್ರವೇ ಸೆರೆಯಾಗಿರುವುದು. ನ್ಯಾಯಾಂಗ ಬಂಧನದಲ್ಲಿರುವ ಇವರ ಜಾಮೀನು ಮನವಿಯನ್ನು ಇಂದು ಪರಿಗಣಿಸುವ ಸಾಧ್ಯತೆ ಇದೆ.
ಆಕ್ರಮಣದ ಬಳಿಕ ಪರಾರಿಯಾದ ರಶೀದ್ ಗೋವಾಕ್ಕೆ ತಲುಪಿ ಅಲ್ಲಿಂದ ಕೊಲ್ಲಿಗೆ ತೆರಳಿರುವುದಾಗಿ ಪೊಲೀಸರಿಗೆ ತನಿಖೆಯಿಂದ ಸ್ಪಷ್ಟವಾಗಿದೆ. ಮೊಬೈಲ್ ಫೋನ್ ಲೊಕೇಶನ್ ಕೇಂದ್ರೀಕರಿಸಿ ನಡೆಸಿದ ತನಿಖೆಯಲ್ಲಿ ಈ ವಿಷಯ ತಿಳಿದುಬಂದಿದೆ. ಇತರ ಆರೋಪಿಗಳಾದ ಅಫ್ಸಲ್, ಸತ್ತಾರ್ ಖಾಲಿಯಾ ರಫೀಕ್ ಕೊಲೆ ಪ್ರಕರಣದ ಆರೋಪಿ ನೂರಲಿ ಎಂಬಿವರ ಪತ್ತೆಗಾಗಿಯೂ ಪೊಲೀಸರು ತನಿಖೆ ತೀವ್ರಗೊಳಿಸಿದ್ದಾರೆ.