ಮಗಳೊಂದಿಗೆ ಪ್ರೇಮ: ಯುವಕನನ್ನು ಮನೆಗೆ ಕರೆಸಿ ಇರಿದು ಕೊಲೆ

ಕೊಲ್ಲಂ: ಮಗಳನ್ನು ಪ್ರೀತಿಸುತ್ತಿದ್ದ ಯುವಕನನ್ನು ತಂದೆ ಉಪಾಯದಿಂದ ಮನೆಗೆ ಕರೆಸಿ ಕೊಲೆಗೈದ ಘಟನೆ ಕೊಲ್ಲಂನಲ್ಲಿ ನಡೆದಿದೆ. ಕೊಲ್ಲಂ ಇರವಿಪುರಂ ನಾನ್ಸಿ ವಿಲ್ಲಾದ ಶಿಜು ಎಂಬವರ ಪುತ್ರ ಅರುಣ್ ಕುಮಾರ್ (19) ಕೊಲೆಗೈಯ್ಯಲ್ಪಟ್ಟ ಯುವಕ.  ಈ ಸಂಬಂಧ ಇರವಿಪುರಂ ಶರವಣನಗರ್ ವೆಳಿ ಎಂಬಲ್ಲಿನ ಪ್ರಸಾದ್ (46) ಎಂಬಾತನನ್ನು ಶಕ್ತಿ ಕುಳಂಗರ ಪೊಲೀಸರು ಬಂಧಿಸಿದ್ದಾರೆ. ನಿನ್ನೆ ಸಂಜೆ  ಈ ಘಟನೆ ನಡೆದಿದೆ.  ಪ್ರಸಾದ್ ತನ್ನ ಸಂಬಂಧಿಕನಾದ ಅರುಣ್ ಕುಮಾರ್‌ನನ್ನು ಮನೆಗೆ ಉಪಾಯದಿಂದ ಕರೆಸಿದ್ದನೆನ್ನಲಾಗಿದೆ. ಬಳಿಕ ಕೈಯಲ್ಲಿ ಬಚ್ಚಿಟ್ಟುಕೊಂಡಿದ್ದ ಚಾಕುವಿನಿಂದ ಅರುಣ್‌ಗೆ ಪ್ರಸಾದ್ ಇರಿದಿರುವುದಾಗಿ ಹೇಳಲಾಗುತ್ತಿದೆ ಪ್ರಸಾದ್‌ನ ಮಗಳನ್ನು ಇತ್ತೀಚೆಗಿನಿಂದ ಸಂಬಂಧಿಕರ ಮನೆಯಲ್ಲಿ ನಿಲ್ಲಿಸಲಾ ಗಿತ್ತು. ಅಲ್ಲಿಗೆ ಅರುಣ್ ತಲುಪಿ ಬಾಲಕಿಯನ್ನು ಕಂಡಿರುವುದಾಗಿ ಆರೋಪಿಸಲಾಗಿದೆ. ಈ ಹೆಸರಲ್ಲಿ ಪ್ರಸಾದ್ ಹಾಗೂ ಅರುಣ್ ಮಧ್ಯೆ ಫೋನ್‌ನಲ್ಲಿ ವಾಗ್ವಾದ ನಡೆದಿತ್ತು. ಅನಂತರ ಸಂಬಂಧಿಕನ ಮೂಲಕ ಅರುಣ್ ಕುಮಾರ್‌ನನ್ನು ಪ್ರಸಾದ್‌ನ ಮನೆಗೆ ಬರುವಂತೆ ತಿಳಿಸಲಾಗಿದೆ. ಇದರಂತೆ ಅಲ್ಲಿಗೆ ತಲುಪಿದ ಅರುಣ್ ಕುಮಾರ್‌ನ ಮೇಲೆ ಆಕ್ರಮಣ ನಡೆದಿದೆ. ಇರಿತದಿಂದ ಗಂಭೀರ ಗಾಯಗೊಂಡ ಅರುಣ್ ಕುಮಾರ್‌ನನ್ನು ಕೊಲ್ಲಂನ ಖಾಸಗಿ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿ ವೇಳೆ ಆತ ಮೃತಪಟ್ಟನು.

You cannot copy contents of this page