ಮಗುವನ್ನು ಬಾವಿಸೆಗೆದು ಕೊಲೆಗೈದ ಪ್ರಕರಣ :ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಾಗದ ಆರೋಪಿ ತಾಯಿ ಸೆರೆ

ಕಾಸರಗೋಡು: ಪುಟ್ಟ ಮಗುವನ್ನು ಬಾವಿಗೆ ಎಸೆದು ಕೊಲೆಗೈದ ಪ್ರಕರಣದ ವಿಚಾರಣೆ ವೇಳೆ ನ್ಯಾಯಾಲಯದಲ್ಲಿ ಹಾಜರಾಗದ ಆರೋಪಿ ತಾಯಿಯನ್ನು ನ್ಯಾಯಾಲಯ ಹೊರಡಿಸಿದ ಆರೆಸ್ಟ್ ವಾರೆಂಟ್‌ನಂತೆ ಬದಿಯಡ್ಕ ಪೊಲೀಸರು ಬಂಧಿಸಿದ್ದಾರೆ.

ಕಾಟುಕುಕ್ಕೆ ಪೆರ್ಲತ್ತಡ್ಕದ ಬಾಬು ಎಂಬವರ ಪತ್ನಿ ಶಾರದ (೨೮) ಬಂಧಿತಳಾದ ಆರೋಪಿ. ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧) ಹೊರಡಿಸಿದ ವಾರಂಟಿನನ್ವಯ ಪೊಲೀಸರು ಆಕೆಯನ್ನು ಬಂಧಿಸಿದ್ದಾರೆ. ಈ ಪ್ರಕರಣದ ವಿಚಾರಣೆ ವೇಳೆ ಇನ್ನು ಮುಂದೆ ಸಕಾಲದಲ್ಲಿ ಹಾಜರಾಗಬೇಕೆಂಬ ಶರತ್ತಿನಡಿ ನ್ಯಾಯಾಲಯ ಆಕೆಗೆ ಬಳಿಕ ಜಾಮೀನು ಮಂಜೂರು ಮಾಡಿದೆ.

೨೦೨೦ ಡಿಸೆಂಬರ್ ೪ರಂದು ರಾತ್ರಿ ತನ್ನ ಮಗುವನ್ನು ಪೆರ್ಲತ್ತಡ್ಕ ಬಾವಿಯೊಂದಕ್ಕೆ ಎಸೆದು ಕೊಲೆಗೈದ ಆರೋಪದಂತೆ ಬದಿಯಡ್ಕ ಪೊಲೀಸರು ಶಾರದಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು. ಅದಕ್ಕೆ ಸಂಬಂಧಿಸಿ ಆಕೆಯನ್ನು ಪೊಲೀಸರು ಬಂಧಿಸಿದ್ದರು. ನಂತರ ಆಕೆಗೆ ನ್ಯಾಯಾಲಯ ಜಾಮೀನು ಮಂಜೂರು ಮಾಡಿತ್ತು. ಬಳಿಕ ಪ್ರಕರಣದ ವಿಚಾರಣೆ ಕಾಸರಗೋಡು ಹೆಚ್ಚುವರಿ ಜಿಲ್ಲಾ ಸೆಶನ್ಸ್ ನ್ಯಾಯಾಲಯ (೧)ದಲ್ಲಿ ಇತ್ತೀಚೆಗೆ ಆರಂಭಗೊಂಡಿತ್ತು. ಆದರೆ ಆರೋಪಿ ಶಾರದ ನ್ಯಾಯಾಲಯದಲ್ಲಿ ಹಾಜರಾಗಿ ರಲಿಲ್ಲ. ಇದರಿಂದ ನ್ಯಾಯಾಲಯ ವಾರೆಂಟ್ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಪೊಲೀಸರು ಆಕೆಯನ್ನು ಬಂಧಿಸಿದರು.

RELATED NEWS

You cannot copy contents of this page