ಮಗುವಿಗೆ ಜನ್ಮನೀಡಿದ 10ನೇ ತರಗತಿ ವಿದ್ಯಾರ್ಥಿನಿ: ತಂದೆ ಸೆರೆ
ಹೊಸದುರ್ಗ: ಹೊಸದುರ್ಗ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 10ನೇ ತರಗತಿ ವಿದ್ಯಾರ್ಥಿನಿ ಮಗುವಿಗೆ ಜನ್ಮ ನೀಡಿದ ಪ್ರಕರಣದಲ್ಲಿ ಆರೋಪಿಯನ್ನು ಸೆರೆ ಹಿಡಿಯಲಾಗಿದೆ. ಬಾಲಕಿಯ ತಂದೆ 48ರ ಹರೆಯದ ವ್ಯಕ್ತಿಯನ್ನು ಪೊಲೀಸರು ಸೆರೆ ಹಿಡಿದಿದ್ದಾರೆ. ಕರ್ನಾಟಕ ನಿವಾಸಿ ಹಾಗೂ ಕಾಞಂಗಾಡ್‌ನ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ವ್ಯಕ್ತಿ ಸೆರೆಯಾಗಿದ್ದಾನೆ. ಪತ್ನಿ ಹಾಗೂ ಐದು ಮಕ್ಕಳ ಜೊತೆಯಲ್ಲಿ ಆರೋಪಿ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದು, ಈ ಮಧ್ಯೆ ಬಾಲಕಿಗೆ ದೌರ್ಜನ್ಯಗೈಯ್ಯ ಲಾಗಿದೆ. ದೌರ್ಜನ್ಯದ ಬಗ್ಗೆ ಅಥವಾ ಗರ್ಭಿಣಿಯಾದ ಬಗ್ಗೆ ತಾಯಿ ಅಥವಾ ಶಾಲಾ ಅಧ್ಯಾಪಿಕೆಯರು ತಿಳಿದಿರಲಿಲ್ಲವೆನ್ನಲಾಗಿದೆ. ಇತ್ತೀಚೆಗೆ ಬಾಲಕಿ ಮನೆಯಲ್ಲಿ ಮಗುವಿಗೆ ಜನ್ಮ ನೀಡಿದಾಗ ದೌರ್ಜನ್ಯ ವಿಷಯ ಬಹಿರಂಗಗೊಂಡಿದೆ. ಹೆರಿಗೆ ಹಿನ್ನೆಲೆಯಲ್ಲಿ ಅಪರಿಮಿತ ರಕ್ತಸ್ರಾವ ಉಂಟಾದಾಗ ಬಾಲಕಿಯನ್ನು ಖಾಸಗಿ ಆಸ್ಪತ್ರೆಗೆ ತಲುಪಿಸಲಾಗಿತ್ತು. ಆಸ್ಪತ್ರೆ ಅಧಿಕಾರಿಗಳು ಈ ವಿಷಯ ವನ್ನು ಪೊಲೀಸರಿಗೆ ತಿಳಿಸಿದ್ದರು. ಪೊಲೀಸರು ತಲುಪಿ ಬಾಲಕಿಯಿಂದ ಹೇಳಿಕೆ ದಾಖಲಿಸಿ ಪೋಕ್ಸೋ ಕೇಸು ದಾಖಲಿಸಿದ್ದರು. ದೌರ್ಜನ್ಯದ ಹಿಂದೆ ಯಾರು ಎಂಬ ಬಗ್ಗೆ ಸ್ಪಷ್ಟಪಡಿಸಲು ಬಾಲಕಿ ಸಿದ್ಧಳಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ನವಜಾತ ಶಿಶುವಿನ ಡಿಎನ್‌ಎ ತಪಾಸಣೆ ನಡೆಸಲು ಪೊಲೀಸರು ತೀರ್ಮಾನಿಸಿದ್ದರು. ಈ ಕ್ರಮ ಮುಂದುವರಿಯುತ್ತಿದ್ದ ಮಧ್ಯೆ ಗರ್ಭಕ್ಕೆ ಕಾರಣ ತಂದೆಯಾಗಿದ್ದಾನೆಂದು ತಿಳಿದು ಬಂದಿತ್ತು. ಈತನನ್ನು ಬಂಧಿಸಿದ ಬಳಿಕ ತಂದೆಯ ಡಿಎನ್‌ಎಯನ್ನು ಪರಿಶೀಲಿಸಲಾಗುವುದೆಂದು ಪೊಲೀಸರು ತಿಳಿಸಿದ್ದಾರೆ.