ಮಗುವಿನ ನಾಮಕರಣಕ್ಕಿರುವ ಸಾಮಗ್ರಿ ಖರೀದಿಸಲು ತೆರಳುತ್ತಿದ್ದಾಗ ಬೈಕ್ ಅಪಘಾತ: ಯುವಕ, ಪತ್ನಿಯ ಸಹೋದರಿ ಮೃತ್ಯು

ಕಾಸರಗೋಡು: ಎರ್ನಾಕುಳಂಗೆ ಸಮೀಪದ ತೇವರೆಯಲ್ಲಿ ಬೈಕ್ ಕೇಬಲ್ ಕಂಬಕ್ಕೆ ಢಿಕ್ಕಿ ಹೊಡೆದು ತೃಕ್ಕರಿಪುರ ನಿವಾಸಿ ಯುವಕ ಹಾಗೂ ಅವರ ಪತ್ನಿಯ ಸಹೋದರಿ  ದಾರುಣವಾಗಿ  ಸಾವನ್ನಪ್ಪಿದ ಘಟನೆ ನಡೆದಿದೆ.

ತೃಕ್ಕರಿಪುರ ಮಾಚ್ಚಿಕೋಡು ಫಾತಿಮಾ ಮಂಜಿಲ್‌ನ ಸೈಬುನ್ನಿಸಾಳ ಮಗ ಸೂಫಿಯನ್ (22) ಮತ್ತು ಇವರ ಪತ್ನಿ ಮಾಳವಿಕಾರ ಸಹೋದರಿ ಜಿಲ್ಲಾ ಹಾಕಿ ತಾರೆ ಎರ್ನಾಕುಳಂ ಕಡವತ್ರ ಕಸ್ತೂರ್‌ಬಾ ನಗರದ ಆನಾಂತುರುತ್ತಿ ವೀಟಿಲ್ ರಾಜು-ಉಮಾದೇವಿ ದಂಪತಿ ಪುತ್ರಿ ಮೀನಾಕ್ಷಿ ರಾಜು 20)  ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳು.

ಸೂಫಿಯಾನ್ ಮತ್ತು ಮಾಳವಿಕ ದಂಪತಿ ಮಗುವಿಗೆ ಹೆಸರಿಡುವ ಕಾರ್ಯಕ್ರಮ ಅವರ ಮನೆಯಲ್ಲಿ ನಿನ್ನೆ ನಡೆಸಲು ತೀರ್ಮಾನಿಸಲಾಗಿತ್ತು. ಇದಕ್ಕೆ  ಸಾಮಗ್ರಿಗಳನ್ನು ಖರೀದಿಸಲು ಸೂಫಿಯಾನ್ ಮತ್ತು ಮೀನಾಕ್ಷಿ ನಿನ್ನೆ  ಬೈಕ್‌ನಲ್ಲಿ ಅಂಗಡಿಗೆ ಹೋಗುತ್ತಿದ್ದ ವೇಳೆ ದಾರಿ ಮಧ್ಯೆ ಬೈಕ್ ರಸ್ತೆ ತಿರುವಿನಲ್ಲಿ ನಿಯಂತ್ರಣ ತಪ್ಪಿ ಕೇಬಲ್ ಕಂಬಕ್ಕೆ ಢಿಕ್ಕಿ ಹೊಡೆದು ಅಲ್ಲೇ ಪಕ್ಕ ನಿಲ್ಲಿಸಲಾಗಿದ್ದ ವಾಹನಗಳ ಮೇಲೆ ಬಿದ್ದಿದೆ. ಗಂಭೀರ ಗಾಯಗೊಂಡಿದ್ದ ಇವರ ಪ್ರಾಣಪಕ್ಷಿ ಅಲ್ಲೇ ಹಾರಿಹೋಗಿದೆ.

ಮೃತ ಮೀನಾಕ್ಷಿ ಕಚ್ಚೇರಿಪ್ಪಾಡಿಯ ಫಾರ್ಮಸಿ ಕೋರ್ಸ್ ವಿದ್ಯಾರ್ಥಿನಿಯಾಗಿದ್ದಾರೆ. ಸೂಫಿಯಾನ್ ಮೂಲತಃ ಕಣ್ಣೂರು ಕಾಕ್ಕಡದ ನಿವಾಸಿಯಾಗಿದ್ದು, ಅಲ್ಲಿಂದ ಇವರು ಕುಟುಂಬ ಸಮೇತ ಇತ್ತೀಚೆಗಷ್ಟೇ ತೃಕರಿಪುರ ಮಾಚಿಕ್ಕಾಡಿಗೆ ವಾಸ್ತವ್ಯ ಬದಲಾಯಿಸಿಕೊಂಡಿದ್ದರು.

ಸೂಫಿಯಾನ್ ಈ ಹಿಂದೆ ಕೊಚ್ಚಿಯ ಜ್ಯೂಸ್ ಅಂಗಡಿಯೊಂದರಲ್ಲಿ ದುಡಿಯುತ್ತಿದ್ದರು. ಅಲ್ಲಿ ಅವರು ಮೀನಾಕ್ಷಿಯ ಸಹೋದರಿ ಮಾಳವಿಕಾಳನ ಕಂಡು ಬಳಿಕ ಅದು ಪ್ರೇಮಕ್ಕೆ ತಿರುಗಿದ ನಂತರ ಒಂದು ವರ್ಷದ ಹಿಂದೆಯಷ್ಟೇ ಅವರು ಮದುವೆಯಾಗಿದ್ದರು.

You cannot copy contents of this page