ಮಚ್ಚಂಪಾಡಿ ಕಿಟ್ಟನಗುಂಡಿಯಲ್ಲಿ ತ್ಯಾಜ್ಯ ಸಂಸ್ಕರಣಾ ಸ್ಥಾವರ ಯೋಜನೆ ಕೈಬಿಡಬೇಕು-ಕ್ರಿಯಾ ಸಮಿತಿ

ಕಾಸರಗೋಡು:  ಮಂಜೇಶ್ವರ ಪಂಚಾಯತ್‌ನ ಏಳನೇ ವಾರ್ಡ್‌ನ ಮಚ್ಚಂಪಾಡಿ ಕಿಟ್ಟನಗುಂಡಿಯಲ್ಲಿ ಆರಂಭಿಸಲಾಗುವ ತ್ಯಾಜ್ಯ ಸಂಸ್ಕರಣಾ ಸ್ಥಾವರ (ಫಿಕಲ್ ಸ್ಲಜ್ಡ್ ಟ್ರೀಟ್‌ಮೆಂಟ್ ಪ್ಲಾಂಟ್) ಯೋಜನೆಯನ್ನು ಕೈಬಿಡಬೇಕೆಂದು ಕ್ರಿಯಾ ಸಮಿತಿಯ ಪದಾಧಿಕಾರಿಗಳು ಕಾಸರಗೋಡು  ಪ್ರೆಸ್ ಕ್ಲಬ್‌ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಪಟ್ಟಿದ್ದಾರೆ.

2005ರಲ್ಲಿ ಕ್ಲೀನ್ ಕೇರಳ ಮಿಶನ್ ಮೂಲಕ ಈ ಪ್ರದೇಶದಲ್ಲಿ ಘನತ್ಯಾಜ್ಯ ಸಂಸ್ಮರಣಾ ಸ್ಥಾವರ ಆರಂಭಿಸಲು ತೀರ್ಮಾನಿಸಲಾಗಿತ್ತು.  ಬಳಿಕ ಸ್ಥಳೀಯರ ಪ್ರತಿಭಟನೆಯ ಹಿನ್ನೆಲೆಯಲ್ಲಿ ಆ ಯೋಜನೆಯನ್ನು ಕೈಬಿಡಲಾಗಿತ್ತು. ಈ ಪ್ರದೇಶವಾಸಿಗಳಿಗಾಗಲೀ, ಗ್ರಾಮ ಸಭೆಯನ್ನು ಕರೆದು ಚರ್ಚಿಸಲಾಗಲೀ ಅಥವಾ ಇತರ ಯಾವುದೇ ರೀತಿಯ ಅವಲೋಕನೆಯನ್ನೂ ನಡೆಸದೆ ಇದೇ ಪ್ರದೇಶದಲ್ಲಿ ಈಗ ತ್ಯಾಜ್ಯ ಸಂಸ್ಕರಣಾ ಸ್ಥಾವರ ಆರಂಭಿಸಲು ಸಂಬಂಧಪಟ್ಟವರು ಮುಂದಾಗಿದ್ದಾರೆ. ಮಂಜೇಶ್ವರ ಮತ್ತು ವರ್ಕಾಡಿ ಪಂಚಾಯತ್‌ಗಳ ನಾಲ್ಕು ವಾರ್ಡ್‌ಗಳಿಗಾಗಿ ಈ ಪ್ರದೇಶದಲ್ಲಿ ಸ್ಥಾವರ ಸ್ಥಾಪಿಸಲು ಉದ್ದೇಶಿಸಲಾಗಿದೆ. ಈ ಪ್ರದೇಶದಲ್ಲಿ  ೩೦೦ಕ್ಕಿಂತಲೂ ಹೆಚ್ಚು ಮನೆಗಳಿವೆ. ಆದರೆ ಅವರೆಲ್ಲಾ ಈ ಯೋಜನೆಯ ವಿರುದ್ದ ಈಗ ಧ್ವನಿಯೆತ್ತಿದ್ದಾರೆ. ಆದ್ದರಿಂದ ಅವರನ್ನೆಲ್ಲಾ ಒಗ್ಗೂಡಿಸಿ ಈ ಯೋಜನೆಯ ವಿರುದ್ದ ಹೋರಾಟ ನಡೆಸಲಾಗುವುದೆಂದು ಕ್ರಿಯಾ ಸಮಿತಿಯ ಪದಾಧಿಕಾರಿಗಳಾದ ಪಿ.ಎಚ್. ಅಬ್ದುಲ್ ಹಮೀದ್, ಅಬ್ದುಲ್ ಹಮೀದ್ ಬಡಾಜೆ, ಆರೀಫ್ ಮಚ್ಚಂಪಾಡಿ, ಖಲೀಲ್ ಮಜಾಲ್, ಅಬ್ದುಲ್ ರಜಾಕ್  ಕಿಟ್ಟನಗುಂಡಿ, ಅಬೂಬಕರ್ ಸಿದ್ದಿಕ್, ಪಿ. ಮುಹಮ್ಮದ್ ಮತ್ತು ಅಬ್ದುಲ್ ರಹಿಮಾನ್ ಪುಚ್ಚತ್ತಬೈಲು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

You cannot copy content of this page