ಮಡಿದ ಯುವತಿಯ ಹಸುಗೂಸಿಗೆ ತಾಯಿ ಮಮತೆಯಿಂದ ಎದೆಹಾಲು ಉಣಿಸಿ ಮಾನವೀಯತೆ ಮೆರೆದ ದಾದಿ
ಕಾಸರಗೋಡು: ಅಸೌಖ್ಯದಿಂದ ಸಾವನ್ನಪ್ಪಿದ ಯುವತಿಯ 32 ದಿನದ ಹಸುಗೂಸು ಹಸಿವಿನಿಂದ ಅಳತೊಡಗಿದಾಗ ಆಸ್ಪತ್ರೆಯ ದಾದಿಯೇ ತಾಯಿ ಮಮತೆ ತೋರಿ ನೇರವಾಗಿ ಮುಂದೆ ಬಂದು ಮಗುವಿಗೆ ತನ್ನ ಎದೆಹಾಲು ಉಣಿಸಿ ಮಾನವೀಯತೆ ಮೆರೆದು ಎಲ್ಲರಿಗೂ ಮಾದರಿಯಾದ ಒಂದು ವಿಶೇಷ ಸನ್ನಿವೇಶ ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ನಡೆದಿದೆ.
ಜನರಲ್ ಆಸ್ಪತ್ರೆಯ ನರ್ಸಿಂಗ್ ಆಫೀಸರ್ ಮೆರಿನ್ ಬೆನ್ನಿ ಈ ರೀತಿ ತಾಯಿ ಮಮತೆ ತೋರಿದ ಯುವತಿ. ಮೂಲತಃ ಅಸ್ಸಾಂ ನಿವಾಸಿ ಹಾಗೂ ಈಗ ಕುಣಿಯಾದ ಬಾಡಿಗೆ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿರುವ ರಾಜೇಶ್ ಬರ್ಮನ್ ಎಂಬವರ ಪತ್ನಿ ಏಕಾದಶಿ ಮಾಲಿ ಎಂಬಾಕೆ ಮೇ ೫ರಂದು ಪರಿಯಾರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದಳು. ಆ ಬಳಿಕ ಆಕೆ ವಾಂತಿಬೇಧಿ ಕಾಯಿಲೆಯಿಂದ ಬಳಲತೊಡಗಿದಾಗ ಕಳೆದ ಮಂಗಳವಾರ ಆಕೆಯನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಅದು ಫಲಕಾರಿಯಾಗದೆ ಆಕೆ ನಿನ್ನೆ ಅಸುನೀಗಿದಳು. ಇದರಿಂದಾಗಿ ಆಕೆಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜನರಲ್ ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲಾಯಿತು. ಆ ವೇಳೆ ಮೃತಳ 32 ದಿನ ಪ್ರಾಯದ ರಿಯಾ ಬರ್ಮನ್ ಎಂಬ ಹೆಸರಿನ ಎಳೆಗೂಸನ್ನು ಕೈಯಲ್ಲೇ ಹಿಡಿದು ಆ ಯುವತಿಯ ಸಂಬಂಧಿಕರು ಶವಾಗಾರದ ಮುಂದೆ ಕಾದು ನಿಂತಿದ್ದರು. ಆಗ ಹಸಿವು ತಾಳಲಾರದೆ ಮಗು ಜೋರಾಗಿ ಅಳತೊಡಗಿದೆ. ಆದರೆ ಮಗುವಿನ ಹಸಿವು ನೀಗಿಸಲು ಏನು ಮಾಡಬೇಕೆಂದು ತೋಚದ ಸಂಬಂಧಿಕರು ತೀವ್ರಸಂಕಷ್ಟದಲ್ಲಿ ಸಿಲುಕಿದಾಗ ಆಪದ್ಭಾಂದವೆ ಎಂಬಂತೆ ನರ್ಸಿಂಗ್ ಆಫೀಸರ್ ಮೆರಿನ್ ನೇರವಾಗಿ ಅಲ್ಲಿಗೆ ಬಂದು ಮಗುವನ್ನು ಪಡೆದುಕೊಂಡು ಹೋಗಿ ತಾಯಿ ಮಮತೆಯಿಂದ ತನ್ನ ಎದೆಹಾಲು ಉಣಿಸಿ ಮಗುವಿನ ಹಸಿವುನೀಗಿಸಿದ್ದಾರೆ. ಆಗಲಷ್ಟೇ ಮಗು ತನ್ನ ಅಳಲನ್ನು ನಿಲ್ಲಿಸಿತು. ಸಕಾಲದಲ್ಲಿ ಆಗಮಿಸಿ ಎದೆಹಾಲು ಉಣಿಸಿ ಮಗುವನ್ನು ಸಂತೈಸುವ ಮೂಲಕ ಮಾನವೀಯತೆ ಮೆರೆದ ಮೆರಿನ್‌ರಿಗೆ ಪ್ರಶಂಸೆಗಳ ಸುರಿಮಳೆಗರೆಯಲಾರಂಭಿಸಿದೆ.
ಬಂದಡ್ಕ ನಿವಾಸಿ ಬಿಪಿನ್ ಥೋಮಸ್‌ರ ಪತ್ನಿಯಾಗಿದ್ದಾರೆ ಮೆರಿನ್. ಇವರು ಒಂದು ವರ್ಷದ ಮಗುವಿನ ತಾಯಿಯೂ ಆಗಿದ್ದಾರೆ. ಹಸಿವಿನಿಂದ ಮಗು ಅಳತೊಡಗಿದಾಗ ಆ ಮಗುವಿನ ಮುಖದಲ್ಲಿ ನನಗೆ ನನ್ನ ಮಗುವಿನ ಮುಖತೋರಿಬಂತೆಂದೂ ಅದರಿಂದ ಆ ಮಗುವಿಗೆ ನಾನು ಎದೆಹಾಲು ಉಣಿಸಿರುವುದಾಗಿ ಮೆರಿನ್ ಹೇಳಿದ್ದಾರೆ. ನಿರ್ಣಾಯಕ ಸಮಯದಲ್ಲಿ ಆಗಮಿಸಿ ಮಗು ಮತ್ತು ಸಂಬಂಧಿಕರಿಗೆ ನೆರವಾದ ಮೆರಿನ್‌ರನ್ನು ಆಸ್ಪತ್ರೆಯ ಡೆಪ್ಯುಟಿ ಸುಪರಿನ್‌ಟೆಂಡೆಂಟ್ ಡಾ| ಜಮಾಲ್ ಅಹಮ್ಮದ್ ಕೂಡಾ ಅಭಿನಂದಿಸಿದ್ದಾರೆ.