ಮತ್ತೆ ಕಾಡಾನೆಗಳ ದಾಳಿ: ಇಬ್ಬರ ಸಾವು
ತೃಶೂರು: ಕಾಡಾನೆಗಳ ದಾಳಿಯಿಂದ ಮತ್ತೆ ಇಬ್ಬರು ದಾರುಣ ವಾಗಿ ಸಾವನ್ನಪ್ಪಿದ ಘಟನೆ ಚಾಲ ಕುಡಿಗೆ ಸಮೀಪದ ವಾಳಚ್ಚಾಲಿನಲ್ಲಿ ನಡೆದಿದೆ. ಶಾಸ್ತಾಂ ಪೂವಂ ವಾಳಚ್ಚಾರ್ ನಿವಾಸಿಗಳಾದ ಅಂಬಿಕ (30), ಸತೀಶನ್ (34) ಎಂಬವರು ಸಾವನ್ನಪ್ಪಿದ ದುರ್ದೈವಿಗಳು. ಇವರು ಸೇರಿದಂತೆ ನಾಲ್ವರು ನಿನ್ನೆ ಕಟ್ಟಿಗೆ ಸಂಗ್ರಹಿಸಲೆಂದು ಅಲ್ಲೇ ಪಕ್ಕದ ವಂಚಿಕಡವು ಕಾಡಿಗೆ ತೆರಳಿದ್ದರು. ಕಟ್ಟಿಗೆ ಸಂಗ್ರಹಿಸಿದ ನಂತರ ಕಾಡಿನಲ್ಲಿ ತಾತ್ಕಾಲಿಕ ಶೆಡ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಆ ವೇಳೆ ಕಾಡಾನೆಗಳ ಹಿಂಡು ಅಲ್ಲಿಗೆ ನುಗ್ಗಿ ಬಂದಾಗ ಹೆದರಿ ಆ ನಾಲ್ವರು ಅಲ್ಲಿಂದ ಓಟ ಕಿತ್ತ ವೇಳೆ ಅಂಬಿಕಾ ಮತ್ತು ಸತೀಶ್ ಕಾಡಾನೆಗಳ ಮುಂದೆ ಸಿಲುಕಿಕೊಂಡರು. ಆಗ ಆನೆಗಳು ಇವರಿಬ್ಬರನ್ನು ತುಳಿದು ಅಲ್ಲೇ ಕೊಂದು ಹಾಕಿವೆ. ಅವರಿಬ್ಬರು ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದಾರೆ. ಈ ಕಾಡಿನಲ್ಲಿ ಈ ವಿಭಾಗಕ್ಕೆ ಸೇರಿದ ಹಲವರು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ ವಾಸಿಸುತ್ತಿದ್ದಾರೆ. ಕಾಡಿನಿಂದ ಲಭಿಸುತ್ತಿರುವ ಸಾಮಗ್ರಿಗಳನ್ನು ಸಂಗ್ರಹಿಸಿ ಮಾರಿ ಜೀವನ ಮಾರ್ಗ ಕಂಡುಕೊಳ್ಳುತ್ತಿರುವವರಾಗಿದ್ದಾರೆ ಇವರು. ಅರಣ್ಯ ಪಾಲಕರು ಘಟನೆ ನಡೆದ ಸ್ಥಳಕ್ಕೆ ಧಾವಿಸಿ ಮೃತದೇಹ ಗಳನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಪರಿಸರದಾದ್ಯಂತ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ.
ರವಿವಾರದಂದು ರಾತ್ರಿ ಇಲ್ಲಿಗೆ ಪಕ್ಕದ ಅಡಿಚ್ಚಿಲ್ ತೊಟ್ಟಿ ಎಂಬಲ್ಲಿ ತಂಬಾನ್ ಎಂಬವರ ಮಗ ಸೆಬಾಸ್ಟಿಯಾನ್ (20) ಎಂಬಾತನನ್ನು ಅರಣ್ಯದಲ್ಲಿ ಕಾಡಾನೆಯೊಂದು ತುಳಿದು ಕೊಂದಿತ್ತು. ಸೆಬಾಸ್ಟಿಯಾನ್ ಮತ್ತು ಆತನ ಸ್ನೇಹಿತ ಜೇಶಾ ಜೇನು ಸಂಗ್ರಹಿಸಲೆಂದು ಮೊನ್ನೆ ರಾತ್ರಿ ಕಾಡಿಗೆ ಹೋಗಿದ್ದರು. ಆ ವೇಳೆ ಕಾಡಾನೆ ದಾಳಿ ಉಂಟಾಗಿತ್ತು. ಅದೂ ಸೇರಿದಂತೆ ನಿನ್ನೆ ನಡೆದ ಕಾಡಾನೆಗಳ ದಾಳಿಗಳಲ್ಲಾಗಿ ಕಳೆದ ಮೂರು ದಿನಗಳಲ್ಲಿ ಒಟ್ಟು ಮೂವರು ಪ್ರಾಣ ಕಳೆದುಕೊಂಡಿದ್ದಾರೆ.