ಮತ್ತೆ ಚಿರತೆ ಕಾಟ: ಸಾಕು ನಾಯಿ ನಾಪತ್ತೆ
ಕಾಸರಗೋಡು: ಜಿಲ್ಲೆಯಲ್ಲಿ ಮತ್ತೆ ಚಿರತೆ ಕಾಟ ತಲೆಯೆತ್ತಿದೆ. ರಾಜಪುರಂ ಸಮೀಪದ ಪನತ್ತಡಿ ಕಲ್ಲಾಪಳ್ಳಿ ದೊಡ್ಡಮನೆಯ ಬಾಬು ಎಂಬವರ ಹಿತ್ತಿಲಿಗೆ ನುಗ್ಗಿದ ಚಿರತೆ ಸಾಕು ನಾಯಿಯನ್ನು ಕಚ್ಚಿ ಕೊಂಡೊಯ್ದಿದೆ. ಮುಂಜಾನೆ 3 ಗಂಟೆಗೆ ಚಿರತೆ ಮನೆಯೊಳಗೆ ಬಂದಿತ್ತೆಂದೂ ಶಬ್ದ ಉಂಟಾದಾಗ, ನಾವು ಹೊರಬಂದು ನೋಡಿದಾಗ ನಾಯಿ ನಾಪತ್ತೆಯಾಗಿದೆಯೆಂದೂ ಮನೆಯವರು ತಿಳಿಸಿದ್ದಾರೆ. ಮಾತ್ರವಲ್ಲ ಮನೆ ಪಕ್ಕದ ಹಲವೆಡೆಗಳಲ್ಲಿ ಚಿರತೆಯ ದ್ದೆಂದು ಸಂಶಯಿಸಲಾಗುತ್ತಿರುವ ಕಾಲ್ಗುರುತುಗಳು ಪತ್ತೆಯಾಗಿದೆ. ಅರಣ್ಯಇಲಾಖೆಯ ಪನತ್ತಡಿ ವಿಭಾಗದ ಸಿಬ್ಬಂದಿಗಳು ಸ್ಥಳಕ್ಕಾಗಮಿ ಸಿ ಶೋಧ ನಡೆಸಿದರೂ ಚಿರತೆಯನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲ.
ಕಳೆದ ಮೂರು ತಿಂಗಳಲ್ಲಿ ಈ ಪ್ರದೇಶದ ಹಲವೆಡೆಗಳಲ್ಲಿ ಹಲವು ಬಾರಿ ಚಿರತೆಯನ್ನು ಕಂಡಿರು ವುದಾಗಿ ಊರ ವರು ತಿಳಿಸಿದ್ದಾರೆ. ಹಲವು ಮನೆಗಳ ನಾಯಿಗಳೂ ನಾಪತ್ತೆಯಾಗಿವೆ. ಪದೇ ಪದೇ ಚಿರತೆ ಪ್ರತ್ಯಕ್ಷ ಗೊಳ್ಳುತ್ತಿರುವುದು ಈ ಪ್ರದೇಶ ನಿವಾಸಿಗಳಲ್ಲಿ ಭೀತಿ ಆವರಿಸುವಂತೆ ಮಾಡತೊಡಗಿದೆ.