ಮತ್ತೆ ತಾರಕಕ್ಕೇರತೊಡಗಿದ ರಾಜ್ಯಪಾಲ-ಸಿ.ಎಂ ಜಟಾಪಟಿ
ತಿರುವನಂತಪುರ: ಮಲಪ್ಪುರಂ ಜಿಲ್ಲೆಯನ್ನು ಕೇಂದ್ರೀಕರಿಸಿ ಅಕ್ರಮ ಚಿನ್ನ ಕಳ್ಳಸಾಗಾಟ ಮತ್ತು ಹವಾಲಾ ವ್ಯವಹಾರ ನಡೆಯುತ್ತಿದ್ದು, ಆ ಹಣವನ್ನು ದೇಶದ್ರೋಹ ಚಟುವಟಿಕೆ ಗಳಿಗಾಗಿ ವಿನಿಯೋಗಿಸಲಾಗುತ್ತಿದೆ ಯೆಂದು ಆಂಗ್ಲಪತ್ರಿಕೆಯೊಂದಕ್ಕೆ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೀಡಿದ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯಪಾಲ ಆರೀಫ್ ಮೊಹಮ್ಮದ್ ಖಾನ್ ಆ ಬಗ್ಗೆ ಕೇಳಿದ ಸ್ಪಷ್ಟೀಕರಣ ವನ್ನು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನಿರಾಕರಿಸಿದ್ದು, ಅದು ಇವರಿಬ್ಬರ ನಡುವಿನ ಜಟಾಪಟಿಯನ್ನು ಇನ್ನಷ್ಟು ತಾರಕಕ್ಕೇರುವಂತೆ ಮಾಡತೊಡಗಿದೆ.
ರಾಜ್ಯಪಾಲರು ಕೇಳಿದ ಸ್ಪಷ್ಟೀಕರಣೆಗೆ ಸರಕಾರ ಉತ್ತರ ನೀಡಬೇಕಾಗಿಲ್ಲ ಮಾತ್ರವಲ್ಲ ಆ ಬಗ್ಗೆ ರಾಜ್ಯಪಾಲರೊಂದಿಗೆ ಯಾವುದೇ ರೀತಿಯ ಚರ್ಚೆಗೂ ತಾನಿಲ್ಲವೆಂದು ಮುಖ್ಯಮಂತ್ರಿ ಹೇಳಿದ್ದು, ಮುಖ್ಯಮಂತ್ರಿ ಯವರ ಈ ನಿಲುವಿನಿಂದ ಗರಂಗೊಂ ಡಿರುವ ರಾಜ್ಯಪಾಲರು ಮತ್ತೆ ಮುಖ ಮಂತ್ರಿಯಿಂದ ಆ ಬಗ್ಗೆ ಸ್ಪಷ್ಟೀಕರಣ ಕೇಳಲು ಮುಂದಾಗಿದ್ದಾರೆ. ನಾನು ಕೇಳಿದ ಸ್ಪಷ್ಟೀಕರಣೆಗೆ ಮುಖ್ಯಮಂತ್ರಿ ಉತ್ತರ ನೀಡದೇ ಇರುವುದರಿಂದ ನಾನು ಯಾರೆಂಬುವುದನ್ನು ಅವರಿಗೆ ತಿಳಿಸುವೆ ಎಂದು ರಾಜ್ಯಪಾಲರು ಖಾರವಾದ ಭಾಷೆಯಲ್ಲೇ ಮುಖ್ಯಮಂತ್ರಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ್ದಾರೆ. ಇದು ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ನಡುವಿನ ಸಂಬಂಧವನ್ನು ಇನ್ನಷ್ಟು ಹಳಸುವಂತೆ ಮಾಡಿದೆ.
ರಾಜ್ಯದಲ್ಲಿ ಚಿನ್ನ ಕಳ್ಳಸಾಗಾಟ ಹಾಗೂ ಹವಾಲಾ ವ್ಯವಹಾರ ನಡೆಯುತ್ತಿದ್ದಲ್ಲಿ ಅದನ್ನು ತಡೆಗಟ್ಟುವುದು ಸರಕಾರದ ಹೊಣೆಗಾರಿಕೆಯಲ್ಲವೇ ಎಂದು ರಾಜ್ಯಪಾಲರು ಪ್ರಶ್ನಿಸಿದ್ದಾರೆ. ಇದೇ ವೇಳೆ ರಾಜ್ಯಪಾಲರ ನಿಲುವನ್ನು ಟೀಕಿಸಿ ಸಿಪಿಎಂ ಕೂಡಾ ರಂಗಕ್ಕಿಳಿದಿದೆ. ಆಡಳಿತ ವಿಷಯದಲ್ಲಿ ರಾಜ್ಯಪಾಲರು ಹಸ್ತಕ್ಷೇಪ ನಡೆಸುವುದು ಸರಿಯಲ್ಲವೆಂದು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಹೇಳಿದ್ದಾರೆ. ಇದು ರಾಜ್ಯಪಾಲರು ಮತ್ತು ಮುಖ್ಯಮಂತ್ರಿ ನಡುವಿನ ಸಂಬಂ ಧವನ್ನು ಇನ್ನಷ್ಟು ಹದಗೆಡುವಂತೆ ಮಾಡತೊಡಗಿದೆ.