ಮತ್ತೆ ರೈಲು ಬುಡಮೇಲು ಕೃತ್ಯ ಯತ್ನ: ತನಿಖೆ ಮುಂದುವರಿಕೆ
ಕುಂಬಳೆ: ಕುಂಬಳೆ ಠಾಣೆ ವ್ಯಾಪ್ತಿಯ ಪೆರಿಂಗಡಿಯಲ್ಲಿ ರೈಲು ಹಳಿಯ ಮೇಲೆ ಕಗ್ಗಲ್ಲುಗಳನ್ನು ಇರಿಸಿ ಬುಡಮೇಲು ಕೃತ್ಯಕ್ಕೆ ಯತ್ನಿಸಿದ ಪ್ರಕರಣದಲ್ಲಿ ತನಿಖೆ ಮುಂದುವರಿ ಯುತ್ತಿದೆ. ರೈಲು ಹಳಿಯಲ್ಲಿ 10 ಮೀಟರ್‌ನಷ್ಟು ವ್ಯಾಪ್ತಿಯಲ್ಲಿ ಕಗ್ಗಲ್ಲುಗಳನ್ನಿರಿಸಿರುವುದು ಮೊನ್ನೆ ಪತ್ತೆಯಾಗಿದೆ. ಕಗ್ಗಲ್ಲು ತುಂಡುಗಳ ಮೇಲೆ ರೈಲು ಸಂಚರಿಸಿದ್ದು, ಆದರೆ ಅದೃಷ್ಟವಶಾತ್ ಅಪಾಯ ತಪ್ಪಿಹೋ ಗಿದೆಯೆಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ. ಮೊನ್ನೆ ಮಧ್ಯಾಹ್ನ 2.30ರ ವೇಳೆ ಆಗಮಿಸಿದ ಮದ್ರಾಸ್ ಮೈಲ್ ರೈಲುಗಾಡಿ ಪೆರಿಂಗಡಿಗೆ ತಲುಪಿದಾಗ ಹಳಿಯಿಂದ ಭೀಕರ ಶಬ್ದ ಕೇಳಿಬಂದಿದೆ. ಶಬ್ದ ಕೇಳಿ ರೈಲು ಅಧಿಕಾರಿಗಳು ಹಾಗೂ ನಾಗರಿಕರು ಬೆಚ್ಚಿ ಬಿದ್ದಿದ್ದಾರೆ. ಶಬ್ದ ಕೇಳಿ ಸ್ಥಳಕ್ಕೆ ನಾಗರಿಕರು ಓಡಿ ತಲುಪಿದ್ದು, ಈ ವೇಳೆ ಹಳಿಯಲ್ಲಿ 10 ಮೀಟರ್‌ನಷ್ಟು ವ್ಯಾಪ್ತಿಯಲ್ಲಿ ಕಗ್ಗಲ್ಲುಗಳನ್ನು ಇರಿಸಿರುವುದು ಕಂಡುಬಂದಿದೆ. ರೈಲು ಸಂಚರಿಸಿದ ಪರಿಣಾಮ ಜಲ್ಲಿಕಲ್ಲುಗಳು ಪುಡಿಗೈಯ್ಯ ಲ್ಪಟ್ಟಿವೆ. ಘಟನೆ ಬಗ್ಗೆ ಲೋಕೋ ಪೈಲಟ್ ಕೂಡಲೇ ಮಂಗಳೂರು ರೈಲ್ವೇ ನಿಲ್ದಾಣಕ್ಕೆ ತಿಳಿಸಿದ್ದರು. ಅವರು ಪಾಲಕ್ಕಾಡ್ ಡಿವಿಶನ್ ಆಫೀಸ್‌ಗೆ ತಿಳಿಸಿದ ಹಿನ್ನೆಲೆಯಲ್ಲಿ ಆರ್‌ಪಿಎಫ್, ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ತಲುಪಿ ತನಿಖೆಗೆ ಚಾಲನೆ ನೀಡಿದ್ದಾರೆ. ರೈಲ್ವೇ ಭದ್ರತಾ ಪಡೆ ಕೂಡಾ ತನಿಖೆ ನಡೆಸುತ್ತಿದೆ.
ಕಾಸರಗೋಡು ಹಾಗೂ ಮಂಜೇಶ್ವರ ಮಧ್ಯೆ ಪದೇ ಪದೇ ಇಂತಹ ದುಷ್ಕೃತ್ಯ ನಡೆಯುತ್ತಿದೆಯಾದರೂ ಇದುವರೆಗೆ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ಸಾಧ್ಯವಾಗಿಲ್ಲವೆನ್ನಲಾಗಿದೆ.