ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸದ ದ್ವೇಷ : ವೃದ್ದೆ ಸಹಿತ ಇಬ್ಬರಿಗೆ ಹಲ್ಲೆ; ಇಬ್ಬರ ವಿರುದ್ಧ ಕೇಸು
ಉಪ್ಪಳ: ಮದುವೆ ಕಾರ್ಯಕ್ರಮ ದಲ್ಲಿ ಭಾಗವಹಿಸದ ದ್ವೇಷದಿಂದ ವೃದ್ದೆಗೆ ಹಲ್ಲೆಗೈದ ಬಗ್ಗೆ ದೂರಲಾಗಿದೆ. ತಡೆಯಲೆತ್ನಿಸಿದ ವೃದ್ದೆಯ ಸಹೋದರನ ಪುತ್ರನಿಗೂ ಹಲ್ಲೆಗೈಯ್ಯಲಾಗಿದೆ. ಘಟನೆಗೆ ಸಂಬಂಧಿಸಿ ಸಹೋದರರಾದ ಇಬ್ಬರ ವಿರುದ್ಧ ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಮಂಗಲ್ಪಾಡಿ ಹೇರೂರು ನೀರಮೂಲೆಯ ಗುಲಾಬಿ (60), ಸಹೋದರನ ಪುತ್ರ ಯತಿರಾಜ್ (30) ಎಂಬಿವರಿಗೆ ಹಲ್ಲೆ ಗೈಯ್ಯಲಾಗಿದೆ. ಘಟನೆಗೆ ಸಂಬಂಧಿಸಿ ಕುಂಜತ್ತೂರು ಪದವು ನಿವಾಸಿ ಅಶ್ವಿತ್, ಸಹೋದರ ಸೌಬಿತ್ ಎಂಬಿವರ ವಿರುದ್ಧ ಕೇಸು ದಾಖಲಿಸಲಾಗಿದೆ. ಕಳೆದ ಮಂಗಳವಾರ ಮಧ್ಯಾಹ್ನ 2 ಗಂಟೆ ವೇಳೆ ಕುಂಜತ್ತೂರು ಪದವಿನಲ್ಲಿರುವ ಸಹೋದರನ ಮನೆಗೆ ಗುಲಾಬಿ ಬಂದಿದ್ದರು. ಈ ವೇಳೆ ಮನೆಯ ಮುಂದೆ ಅಶ್ವಿತ್ ಹಾಗೂ ಸೌಬಿತ್ ಸೇರಿ ಗುಲಾಬಿಯ ಕೂದಲು ಹಿಡಿದೆಳೆದು ನೆಲಕ್ಕೆ ದೂಡಿ ಹಾಕಿ ಹಲ್ಲೆ ಗೈದಿರುವುದಾಗಿ ಪೊಲೀಸರು ದಾಖಲಿಸಿಕೊಂಡ ಪ್ರಕರಣದಲ್ಲಿ ಹೇಳಲಾಗಿದೆ. ವೃದ್ದೆಗೆ ಹಲ್ಲೆಗೈಯ್ಯುತ್ತಿರುವುದನ್ನು ಕಂಡು ತಡೆಯಲೆತ್ನಿಸಿದಾಗ ಯತಿರಾಜ್‌ಗೂ ಹಲ್ಲೆಗೈಯ್ಯಲಾಗಿದೆ. ಸೌಬಿತ್‌ನ ಮದುವೆ ಕಾರ್ಯಕ್ರಮದಲ್ಲಿ ಭಾಗವಹಿಸದ ದ್ವೇಷದಿಂದ ಗುಲಾಬಿಗೆ ಹಲ್ಲೆಗೈದಿರುವುದಾಗಿ ಹೇಳಲಾಗುತ್ತಿದೆ.