ಮದ್ಯಪಾನ ವಿಷಯದಲ್ಲಿ ಜಗಳ: ತಂದೆಯನ್ನು ಹೊಡೆದು ಕೊಲೆಗೈದ ಪುತ್ರ
ಕಲ್ಲಿಕೋಟೆ: ಮದ್ಯಪಾನದ ಹೆಸರಲ್ಲಿ ಉಂಟಾದ ತರ್ಕದ ಮಧ್ಯೆ ತಂದೆಯನ್ನು ಮಗ ಹೊಡೆದು ಕೊಲೆಗೈದ ಘಟನೆ ಪೇರಾಂಬ್ರದಲ್ಲಿ ನಡೆದಿದೆ. ಪೇರಾಂಬ್ರ ಕುತ್ತಾಳಿ ನಿವಾಸಿ ಶ್ರೀಧರನ್ (69) ಎಂಬವರು ಕೊಲೆಗೀಡಾದ ವ್ಯಕ್ತಿ. ಈ ಸಂಬಂಧ ಪುತ್ರ ಶ್ರೀಲೇಶ್ನನ್ನು ಪೊಲೀಸರು ಬಂಧಿಸಿದ್ದಾರೆ.
ತಂದೆ ಹಾಗೂ ಮಗ ನಿತ್ಯ ಮದ್ಯಪಾನಿಗಳಾಗಿದ್ದಾರೆ. ಇವರ ಮಧ್ಯೆ ನಿರಂತರ ಜಗಳವೂ ನಡೆಯುತ್ತಿತ್ತೆನ್ನಲಾಗಿದೆ. ಇವರಿಬ್ಬರು ಮಾತ್ರವೇ ಮನೆಯಲ್ಲಿ ವಾಸಿಸುತ್ತಿದ್ದರು. ಮೊನ್ನೆ ಮಧ್ಯಾಹ್ನ ಶ್ರೀಲೇಶ್ ತಾಯಿಗೆ ಕರೆ ಮಾಡಿ ತಂದೆಗೆ ಸೌಖ್ಯವಿಲ್ಲವೆಂದು ತಿಳಿಸಿದ್ದನು. ಇದರಂತೆ ತಾಯಿ ವಿಮಲ ಹಾಗೂ ಸಹೋದರಿ ಮನೆಗೆ ತಲುಪಿದಾಗ ಶ್ರೀಧರನ್ ಮಂಚದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ತಲೆಯ ಹಿಂಭಾಗದಲ್ಲಿ ಹೊಡೆತದ ಗಾಯವುಂಟಾಗಿದ್ದು, ರಕ್ತ ಒಸರುತ್ತಿರುವುದು ಕಂಡುಬಂದಿದೆ. ನಾಗರಿಕರು ನೀಡಿದ ಮಾಹಿತಿಯಂತೆ ಪೇರಾಂಬ್ರ ಪೊಲೀಸರು ಸ್ಥಳಕ್ಕೆ ತಲುಪಿ ತನಿಖೆ ನಡೆಸಿದಾಗ ಶ್ರೀಧರನ್ರನ್ನು ಮಗ ಶ್ರೀಲೇಶ್ ಕೊಲೆಗೈದುದಾಗಿ ತಿಳಿದುಬಂದಿದೆ. ಬಳಿಕ ಆತನನ್ನು ಬಂಧಿಸಲಾಗಿದೆ.