ಮಧೂರು ಕ್ಷೇತ್ರದಲ್ಲಿ ರಾಜಗೋಪುರ ನಿರ್ಮಿಸಲು ತೀರ್ಮಾನ: ವೆಚ್ಚ ನಿರೀಕ್ಷೆ ಒಂದು ಕೋಟಿ ರೂ.
ಮಧೂರು: ದಕ್ಷಿಣ ಭಾರತದ ಪ್ರಧಾನ ಧಾರ್ಮಿಕ ತೀರ್ಥಾಟನಾ ಕೇಂದ್ರಗಳಲ್ಲೊಂದಾಗಿರುವ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರದಲ್ಲಿ ರಾಜಗೋಪುರ ನಿರ್ಮಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಇದಕ್ಕೆ ಒಂದು ಕೋಟಿ ರೂ.ನಷ್ಟು ಖರ್ಚು ಅಂದಾಜಿಸಲಾಗಿದೆ.
ರಾಜಗೋಪುರಕ್ಕೆ ನವೆಂಬರ್ ೨೫ರಂದು ಶಿಲಾನ್ಯಾಸ ಕಾರ್ಯ ನೆರವೇರಿಸಲು ಶ್ರೀ ಕ್ಷೇತ್ರದ ನವೀಕರಣೆ ಸಮಿತಿ ಚಿಂತನೆ ನಡೆಸಿದೆ. ಕೇಂದ್ರ ಸಚಿವರೋರ್ವರಿಂದ ಇದರ ಶಿಲಾನ್ಯಾಸ ನಡೆಸುವ ಬಗ್ಗೆಯೂ ಸಮಿತಿ ಆಲೋ ಚಿಸುತ್ತಿದೆ. ೩೦.೬ ಅಡಿ ಉದ್ದ, ೧೭.೩ ಅಡಿ ವಿಸ್ತೀರ್ಣ ಹಾಗೂ ೪೧ ಅಡಿ ಎತ್ತರದಲ್ಲಿ ಈ ಗೋಪುರ ನಿರ್ಮಿಸುವ ತೀರ್ಮಾನ ಕೈಗೊಳ್ಳಲಾಗಿದೆ. ಬ್ರಹ್ಮಕಲಶೋತ್ಸವ ಸಮಿತಿಯ ಗೌರವ ಅಧ್ಯಕ್ಷ ಕನ್ಯಾನ ಕುಳೂರು ನಿವಾಸಿ ಸದಾಶಿವ ಶೆಟ್ಟಿಯವರು ಈ ರಾಜಗೋಪುರದ ನಿರ್ಮಾಣ ವೆಚ್ಚ ವಹಿಸಲು ಮುಂದೆ ಬಂದಿದ್ದಾರೆ.
ಮಧೂರು ಕ್ಷೇತ್ರದ ನವೀಕರಣೆ ಕೆಲಸ ಈಗ ಅಂತಿಮ ಹಂತದಲ್ಲಿದೆ. ಇದಕ್ಕಾಗಿ ಈಗಾಗಲೇ ೨೦ ಕೋಟಿ ರೂ. ವ್ಯಯಿಸಲಾಗಿದೆ. ಅತಿಥಿಗೃಹ, ರಾಜಗೋಪುರ ಮತ್ತು ಭೋಜನಶಾಲೆಯ ಕೆಲಸ ಇನ್ನು ಬಾಕಿ ಉಳಿದುಕೊಂಡಿದೆ. ಇದಕ್ಕೆ ಮೂರು ಕೋಟಿ ರೂ. ವೆಚ್ಚ ನಿರೀಕ್ಷಿಸಲಾಗಿದೆ. ಎಲ್ಲಾ ನವೀಕರಣೆ ಸೇರಿದಂತೆ ಇತರ ಎಲ್ಲಾ ಕಾಮಗಾರಿ ಕೆಲಸಗಳನ್ನು ಪೂರ್ತೀಕರಿಸಿ ೨೦೨೫ರಲ್ಲಿ ಬ್ರಹ್ಮಕಲಶೋತ್ಸವ ನಡೆಸಲು ಸಮಿತಿ ತೀರ್ಮಾನಿಸಿದೆ.