ಮಧೂರು ಶ್ರೀ ಮಹಾಗಣಪತಿಗೆ 33 ವರ್ಷಗಳ ಬಳಿಕ ಇಂದು ಮೂಡಪ್ಪಸೇವೆ
ಮಧೂರು: ಕುಂಬಳೆ ಸೀಮೆಯ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಮಧೂರು ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ದೇವಸ್ಥಾನದಲ್ಲಿ ಶತಮಾನದ ಮೊದಲ ಮೂಡಪ್ಪಸೇವೆ ಇಂದು ಜರಗಲಿದೆ. ಕಳೆದ ಹದಿ ನಾಲ್ಕು ವರ್ಷಗಳಿಂದ ನವೀಕರಣ ಜೀರ್ಣೋದ್ಧಾರ ಪ್ರಕ್ರಿಯೆ ಪೂರ್ತಿಗೊಂಡು ಪುನಃ ಪ್ರತಿಷ್ಟಾ ಬ್ರಹ್ಮಕಲಶ ಸಮಾಪ್ತಿಯಾಗಿದೆ. ಕುಂಬಳೆ ಸೀಮೆಯ ಅತೀ ದೊಡ್ಡ ಸಂಭ್ರಮವಾಗಿ ಮೂಡಪ್ಪ ಸೇವೆಗೆ ಮಧೂರು ದೇಗುಲ ಅಣಿಯಾಗಿದೆ. ಮಹಾ ಉತ್ಸವಕ್ಕೆ ಲಕ್ಷಾಂತರ ಮಂದಿ ಭಕ್ತಾದಿಗಳು ಮಧೂರಿಗೆ ಬಂದು ಸೇರಿದ್ದಾರೆ.
ಮೂಡಪ್ಪ ಸೇವೆಗೆ ಕ್ಷೇತ್ರ ಸಜ್ಜುಗೊಂಡಿದ್ದು, ಅಕ್ಕಿ ಮುಹೂರ್ತ ನಿನ್ನೆ ನೆರವೇರಿತು. ಬೆಳಿಗ್ಗೆ ದೀಪದ ಬಲಿ, ಶತರುದ್ರಾಭಿಷೇಕ, 128 ಕಾಯಿ ಅಷ್ಟದ್ರವ್ಯ ಮಹಾಗಣಪತಿ ಯಾಗ ನೆರವೇರಿತು. ಪಾರಂಪರಿಕ ಒನಕೆ ಹಾಗೂ ಬೀಸುವ ಕಲ್ಲಿನ ಮೂಲಕ ಅಕ್ಕಿ ಹುಡಿಮಾಡುವ ಪ್ರಕ್ರಿಯೆ ನಡೆಯಲಿದ್ದು, ಶ್ರೀ ದೇವರ ನಡೆಯಲ್ಲಿ ಅರೆಯುವ ಕಲ್ಲು, ಒನಕೆ ಹಾಗೂ ಬೀಸುವ ಕಲ್ಲಿಗೆ ಪೂಜೆ ನಡೆಸಲಾಯಿತು.
ಶ್ರೀ ಮಹಾಗಣಪತಿಯನ್ನು ಅಪ್ಪದಿಂದ ಮುಚ್ಚುವ ಅತೀ ವಿಶಿಷ್ಟ ಹಾಗೂ ಪ್ರಧಾನ ಸೇವೆಯಾಗಿದೆ ಮೂಡಪ್ಪ ಸೇವೆ. ಗಣಪತಿ ವಿಗ್ರಹದ ಸುತ್ತ ಸುಮಾರು ಆರೂವರೆ ಅಡಿ ಎತ್ತರದಲ್ಲಿ ಕಬ್ಬಿನಿಂದ ಬೇಲಿ ತಯಾರಿಸಿ ಅದರೊಳಗೆ ಅಷ್ಟದ್ರವ್ಯಗಳ ಸಹಿತ 144 ಸೇರು ಅಕ್ಕಿಯಿಂದ ಅಪ್ಪ ಹಾಗೂ 11 ಸೇರು ಅಕ್ಕಿಯಿಂದ ತಯಾರಿಸಿದ ಪಚ್ಚಪ್ಪ ತಯಾರಿಸಿ ಶ್ರೀ ಮಹಾಗಣಪತಿಯ ಕತ್ತಿನ ಭಾಗದ ವರೆಗೆ ತುಂಬಲಾಗುವುದು. ಇದೇ ಸಂದರ್ಭ ಶ್ರೀ ಮದನಂತೇಶ್ವರ ದೇವರಿಗೆ ಮೂರು ಮುಡಿ ಅಕ್ಕಿಯಿಂದ ತಯಾರಿಸಿದ ಅಪ್ಪ ಹಾಗೂ ಒಂದು ಮುಡಿ ಅಕ್ಕಿಯ ನೈವೇದ್ಯ ಸಮರ್ಪಿಸಲಾಗುವುದು.
ಇಂದು ಬೆಳಿಗ್ಗೆ ಶ್ರೀ ದೇವರ ದೀಪದ ಬಲಿ, ದರ್ಶನಬಲಿ, ಶತರು ದ್ರಾಭಿಷೇಕ, 128 ಕಾಯಿ ಅಷ್ಟದ್ರವ್ಯ ಮಹಾಗಣಪತಿಯಾಗ ನಡೆಯಿತು. ನಂತರ ಮೂಡಪ್ಪ ತಯಾರಿಯ ಅರಿಕೊಟ್ಟಿಗೆಯ ಮುಹೂರ್ತ ನಡೆ ಯಲಿದೆ. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಬೆಳಗ್ಗಿನ ಜಾವ ಶ್ರೀ ದೇವರಿಗೆ ಕಲಶಾಭಿಷೇಕ ನಡೆಸಿ, ಅರಿಕೊಟ್ಟಿಗೆ ಪ್ರವೇಶಿಸಿ ದ್ವಿಜರಿಗೆ ಮುಹೂರ್ತ ದಾನ ದಕ್ಷಿಣೆ ಕೊಟ್ಟು, ಸರ್ವಾಪ್ಪಣೆ ಪಡೆದು ಅಪ್ಪ ತಯಾರಿಗೆ ನಾಂದಿ ಹಾಡಲಾ ಯಿತು. ಈ ಬಾರಿ ಮಧೂರಿನ ದೇವನರ್ತಕ ಧನಂಜಯರಿಗೆ ಮೂಡಪ್ಪ ಅಪ್ಪ ಸೇವಾ ನಿರ್ಮಾಣ ಜವಾಬ್ದಾರಿ ವಹಿಸಲಾಗಿದೆ.
ಸಂಜೆ 5ಕ್ಕೆ ಮಧೂರಿನಲ್ಲಿ ಉತ್ಸವ ಬಲಿ ನಡೆದು ಬಳಿಕ ದೇವರು ಮೂಲಸ್ಥಾನಕ್ಕೆ ಸವಾರಿ ಹೊರಡುವರು. ರಾತ್ರಿ ಮೂಲಸ್ಥಾನದ ಬೆಡಿಕಟ್ಟೆಯಲ್ಲಿ ಸುಡುಮದ್ದು ಪ್ರದರ್ಶನ ನಡೆದು, ದೇವರು ಕ್ಷೇತ್ರಕ್ಕೆ ನಿರ್ಗಮಿಸುವ ಯಾತ್ರೆ ನಡೆಯಲಿದ್ದು, ನಂತರ ದೇವಳದಲ್ಲಿ ಶ್ರೀ ಭೂತಬಲಿ ನಡೆದು ಮಹಾ ಮೂಡಪ್ಪಾಧಿವಾಸ ಹೋಮ ಜರಗಲಿದೆ.
?ನಾಳೆ ಬೆಳಿಗ್ಗೆ 6.20ಕ್ಕೆ ಕವಾಟೋದ್ಘಾಟನೆ, ಅಪೂಪ ಪರ್ವತದ ಮಧ್ಯದಿಂದ ಮೂಡಿ ಬರುವ ಬೊಡ್ಡಜ್ಜ ಶ್ರೀ ಮಧೂರು ಸಿದ್ಧಿವಿನಾಯಕ ದೇವರ ದಿವ್ಯದರ್ಶನ, ವಿಶೇಷಾಭಿಷೇಕ, ಪ್ರಸನ್ನಪೂಜೆ, ಅಪೂಪಪ್ರಸಾದ ವಿತರಣೆ ಬಳಿಕ 128 ಕಾಯಿ ಅಷ್ಟದ್ರವ್ಯ ಮಹಾಗಣಪತಿಯಾಗ, ಮಹಾಪೂಜೆ, ಸಂಜೆ 6ಕ್ಕೆ ಜಳಕದ ಬಲಿ, ಕಟ್ಟೆಪೂಜೆ, ಶ್ರೀ ದೇವರ ಕೆರೆಯಲ್ಲಿ ಅವಭೃತ ಸ್ನಾನ, ದರ್ಶನಬಲಿ, ರಾಜಾಂಗಣ ಪ್ರಾಸಾದ ಬಳಿಕ ಧ್ವಜಾವರೋಹಣ ನಡೆಯಲಿರುವುದು.
ಸಾಂಸ್ಕೃತಿಕ ಕಾರ್ಯಕ್ರಮದಂ ಗವಾಗಿ ಇಂದು ಮಧ್ಯಾಹ್ನ 12.30ಕ್ಕೆ ವಿದುಷಿ ಮಹಿಮಾ ಎಸ್.ರಾವ್ ಕಾಸ ರಗೋಡು ಅವರಿಂದ ನೃತ್ಯ ಕಾರ್ಯ ಕ್ರಮ, 1.30ಕ್ಕೆ ಅಶ್ವಿನಿ ಕೆ ಕಾಂತಬೈಲು ಬೆಂಗಳೂರು ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ, 2.30ಕ್ಕೆ ಶ್ರೀ ಶಂಕರ್ ಸ್ಕೂಲ್ ಆಫ್ ಡ್ಯಾನ್ಸ್ ಬೆಂ ಗಳೂರು ಅವರಿಂದ ನೃತ್ಯ ವೈವಿಧ್ಯ, ರಾತ್ರಿ 7ಕ್ಕೆ ಸ್ವಾಮಿಮಲೈ ಎಸ್.ಕೆ. ಸುರೇಶ್ ಚೆನ್ನೈ ಅವರಿಂದ ಭರತನಾಟ್ಯ,
8.30ಕ್ಕೆ ದಿವ್ಯಾ ವೇಣುಗೋಪಾಲ್ ಚೆನ್ನೈ ಅವರಿಂದ ನಾಟ್ಯ ವೈಭವ, 9.30ಕ್ಕೆ ತನ್ಮಯೀ ಸ್ಕೂಲ್ಆಫ್ ಡ್ಯಾನ್ಸ್ ಪರಕ್ಕಿಲ ಅವರಿಂದ ನೃತ್ಯ ಕಾರ್ಯಕ್ರಮ ನಡೆಯಲಿದೆ. ಇಂದು ಸಂಜೆ 4ಕ್ಕೆ ಉಡುಪಿ ಶ್ರೀ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಬಳಿಕ 4.30ಕ್ಕೆ ಧಾರ್ಮಿಕ ಸಭೆ ನಡೆಯಲಿದೆ. ಕರ್ನಾಟಕ ಉಪಮುಖ್ಯಮಂತ್ರಿ ಕೆ. ಶಿವಕುಮಾರ್, ಮೂಡಬಿದಿರೆ ಶಾಸಕ ಉಮಾನಾಥ ಕೋಟ್ಯಾನ್, ಬಿಜೆಪಿ ಕೇರಳ ರಾಜ್ಯ ಮಾಜಿ ಅಧ್ಯಕ್ಷ ಕೆ. ಸುರೇಂದ್ರನ್, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಎಒಎಲ್ಇ ಸುಳ್ಯ ಇದರ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ, ಧಾರ್ಮಿಕ ಮುಂದಾಳು ಬಿ. ವಸಂತ ಪೈ ಬದಿಯಡ್ಕ ಮೊದಲಾದವರು ಮುಖ್ಯ ಅತಿಥಿಗಳಾಗಿರುವರು. ಕೇರಳ, ಕರ್ನಾಟಕದ ಪ್ರಶಸ್ತಿ ವಿಜೇತ ದೇವನರ್ತಕ, ಮಧೂರು ಕ್ಷೇತ್ರ ಸಿಬ್ಬಂದಿ ಧನಂಜಯ ಅಪ್ಪ ತಯಾರಿಯ ನೇತೃತ್ವ ವಹಿಸಿದ್ದು, ಇವರು ಮಧೂರಿನ ಪಡು ಕಕ್ಕೆಪ್ಪಾಡಿ ಮನೆಯವರು. ಈ ಹಿಂದೆ 1962ರಲ್ಲಿ ಮಧೂರಿನಲ್ಲಿ ನಡೆದ ಮೂಡಪ್ಪ ಸೇವೆ ಮತ್ತು 1992ರ ಮೂಡಪ್ಪ ಸೇವೆಯಲ್ಲಿ ಆ ಕಾಲದಲ್ಲಿ ಪ್ರಸಿದ್ಧ ದೇವನರ್ತಕರಾಗಿದ್ದ ಪಡುಕಕ್ಕೆಪ್ಪಾಡಿ ರಾಮಕೃಷ್ಣ ಭಟ್ರ ಪುತ್ರ.