ಮನೆಗಳಲ್ಲಿ ಕಳವು : ಕುಖ್ಯಾತ ಕಳ್ಳರ ತಂಡ ಸೆರೆ
ಕಣ್ಣೂರು: ಜನವಾಸವಿಲ್ಲದ ಮನೆಗಳಿಗೆ ತಲುಪಿ ಕಳವು ನಡೆಸುವ ಕುಖ್ಯಾತ ತಂಡವೊಂದು ಸೆರೆಗೀಡಾಗಿದೆ. ತಮಿಳುನಾಡು ನಂಗಿಯ ಮುಟ್ಟಿಕುಂಬಿಲ್ ಎಂಬಲ್ಲಿನ ಎನ್.ಕೆ. ಮಣಿ (40), ತಂಜಾವೂರು ಗಾಂಧಿನಗರ ಕಾಲನಿಯ ತೆಂಗಿಪೆಟ್ಟಿಯ ಮುತ್ತು (32), ವಳ್ಳೂರು ಪೆರಿಯ ನಗರದ ಆರ್. ವಿಜಯನ್ (35) ಎಂಬಿವರನ್ನು ಧರ್ಮಡಂ ಪೊಲೀಸರು ಸೆರೆ ಹಿಡಿದಿದ್ದಾರೆ.
ಮೇ ೧೬ರಂದು ತಲಶ್ಶೇರಿ, ಪಾಲಕ್ಕಾಡ್, ಚಿರಕ್ಕುನಿ, ಮಾನಿಯತ್ ಎಂಬಲ್ಲಿನ ಶಾಲೆ ಸಮೀಪದ ನಿವೃತ್ತ ಹೆಲ್ತ್ ಇನ್ಸ್‌ಪೆಕ್ಟರ್ ಪಿ.ಕೆ. ಸತೀಶನ್‌ರ ಮನೆಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿ ಈ ಮೂವರನ್ನು ಬಂಧಿಸಲಾಗಿದೆ. ಸತೀಶನ್ ಹಾಗೂ ಕುಟುಂಬ ಮನೆಯಲ್ಲಿಲ್ಲದಿರುವುದನ್ನು ಗಮನಿಸಿದ ತಂಡ ರಾತ್ರಿ ಹೊತ್ತಿನಲ್ಲಿ ಬಾಗಿಲು ಮುರಿದು ಒಳನುಗ್ಗಿ ಕಪಾಟು ತೆರೆದು ಐದು ಪವನ್ ಚಿನ್ನ ಹಾಗೂ 5000 ರೂಪಾಯಿಗಳನ್ನು ಕಳವು ನಡೆಸಿತ್ತು. ಕಳವು ತಂಡದ ಸೂತ್ರಧಾರನಾದ ಎನ್.ಕೆ. ಮಣಿಯನ್ನು ತಲಶ್ಶೇರಿ ಎಸಿಪಿಯ ಸ್ಕ್ವಾಡ್ ಸೆರೆ ಹಿಡಿದು ತನಿಖೆಗೊಳಪಡಿಸಿದಾಗ ಮತ್ತಿಬ್ಬರ ಕುರಿತು ಮಾಹಿತಿ ಲಭಿಸಿದೆ. ಬಳಿಕ ಕೊಯಿಲಾಂಡಿ ಭಾಗದಲ್ಲಿ ನಡೆದ ತನಿಖೆಯಲ್ಲಿ ಮುತ್ತು ಹಾಗೂ ವಿಜಯನ್‌ನನ್ನು ಸೆರೆ ಹಿಡಿಯಲಾಗಿದೆ. ಆರೋಪಿಗಳನ್ನು ಸಮಗ್ರವಾಗಿ ತನಿಖೆಗೊಳಪಡಿಸಿದರೆ ಇನ್ನಷ್ಟು ಕಳವು ಪ್ರಕರಣಗಳ ಕುರಿತು ಮಾಹಿತಿ ಲಭಿಸಲಿದೆ ಎಂದು ಪೊಲೀಸರು ನಿರೀಕ್ಷಿಸಿದ್ದಾರೆ.