ಕೋಟಯಂ: ಮನೆಯಲ್ಲಿ ಭಾರೀ ದೋಷವಿದೆ ಎಂದು ತಿಳಿಸಿ ಅದರ ಪರಿಹಾರಕ್ಕೆ ಚಿನ್ನಾಭರಣವನ್ನು ಪೂಜಿಸಬೇಕು ಎಂದು ವಂಚಿಸಿ ಚಿನ್ನಾಭರಣ ಅಪಹರಿಸಿದ ಪ್ರಕರಣದಲ್ಲಿ ಯುವತಿಯನ್ನು ಸೆರೆ ಹಿಡಿಯಲಾಗಿದೆ. ಪಾಲ ಕಡನಾಡು ನಿವಾಸಿ ಶಾಜಿತ ಶರೀಫ್‌ನನ್ನು ಕೋಟ್ಟಯಂ ಈಸ್ಟ್ ಪೊಲೀಸರು ಸೆರೆ ಹಿಡಿದಿದ್ದಾರೆ. ಕಳೆದ ತಿಂಗಳು ಪುದುಪ್ಪಳ್ಳಿ ಇರವಿ ನೆಲ್ಲೂರ್ ನಿವಾಸಿಯ 12 ಪವನ್ ಚಿನ್ನಾಭರಣ ಇಬ್ಬರು ಯುವತಿಯರು ಸೇರಿ ಅಪಹರಿಸಿದ್ದರು. ಸಾಮಗ್ರಿಗಳನ್ನು ಮಾರಾಟ ಮಾಡಲೆಂದು ತಲುಪಿ ಮನೆಯೊಡತಿಯೊಂದಿಗೆ ಮಾತುಕತೆ ನಡೆಸುತ್ತಿದ್ದ ಮಧ್ಯೆ ಮನೆಗೆ ಕಂಟಕವಿದೆ ಎಂದು ಅದರ ಪರಿಹಾರಕ್ಕೆ ಚಿನ್ನವನ್ನು ಇರಿಸಿ ಪೂಜಿಸಿದರೆ ದೋಷ ಪರಿಹಾರವಾಗುವುದೆಂದು ತಿಳಿಸಿದ್ದರು. ಇದನ್ನು ನಂಬಿದ ಗೃಹಿಣಿ ಚಿನ್ನಾಭರಣವನ್ನು ಅವರಿಗೆ ನೀಡಿದ್ದರು. ಚಿನ್ನ ಲಭಿಸಿದ ಕೂಡಲೇ ಯುವತಿಯರು ಪರಾರಿಯಾಗಿದ್ದಾರೆ. ಪ್ರಾಥಮಿಕವಾಗಿ ಕೇಸು ಕೂಡಾ ದಾಖಲಿಸಲು ಪೊಲೀಸರು ಇದನ್ನು ವಿಶ್ವಾಸಕ್ಕೆ ತೆಗೆದಿರಲಿಲ್ಲ. ಬಳಿಕ ನಡೆಸಿದ ತನಿಖೆಯಲ್ಲಿ ಯುವತಿಯನ್ನು ಸೆರೆ ಹಿಡಿಯಲಾಗಿದೆ. ಇವರ ರೇಖಾಚಿತ್ರವನ್ನು ಈ ಮೊದಲು ಪೊಲೀಸರು ಬಹಿರಂಗಪಡಿಸಿದ್ದರು. ಮೊಬೈಲ್ ಫೋನ್ ಸಹಿತದ ತನಿಖೆ ನಡೆಸಿ ಆರೋಪಿಯನ್ನು ಸೆರೆಹಿಡಿಯಲಾಗಿದೆ. ಇನ್ನೋರ್ವೆಯ ಪತ್ತೆಗಾಗಿ ಪೊಲೀಸರು ಯತ್ನ ಆರಂಭಿಸಿದ್ದಾರೆ.
