‘ಮನೆಯಲ್ಲೇ ಕುಳಿತು ಸಂಪಾದಿಸಿ’ ಹೆಸರಲ್ಲಿ ಹಣ ಲಪಟಾವಣೆವ್ಯಾಪಕ: ಯುವತಿಯ ೧.೭೮ ಲಕ್ಷ ರೂ. ನಷ್ಟ
ಕಾಸರಗೋಡು: ಮನೆಯಲ್ಲೇ ಕುಳಿತು ಹಣ ಸಂಪಾದಿಸಿ ಎಂಬ ರೀತಿಯ ಮೋಹಕ ವಾಗ್ದಾನಗಳನ್ನು ಸಾಮಾಜಿಕ ತಾಣಗಳಲ್ಲಿ ನೀಡಿ ಹಣ ಲಪಟಾಯಿಸುವ ಅಗೋಚರ ವಂಚನಾ ಜಾಲ ರಾಜ್ಯದಲ್ಲಿ ಇತ್ತೀಚೆಗಿನಿಂದ ಹೆಚ್ಚಾಗತೊಡಗಿದೆ. ಇಂತಹ ಮೋಹನ ವಾಗ್ದಾನಕ್ಕೆ ಬಿದ್ದು ಯುವತಿಯೋರ್ವೆ ೧.೭೮ ಲಕ್ಷ ರೂ.ವನ್ನು ಈ ವಂಚನಾ ಜಾಲದವರು ಲಪಟಾಯಿಸಿದ್ದಾರೆ. ಆ ಬಗ್ಗೆ ಆಕೆ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮನೆಯಲ್ಲಿ ಕುಳಿತುಕೊಂಡೇ ದುಡ್ಡು ಸಂಪಾದಿಸಿರಿ ಎಂಬ ಆನ್‌ಲೈನ್ ಸಂದೇಶವೊ ಅಂದು ನನ್ನ ಮೊಬೈಲ್ ಫೋನ್‌ಗೆ ಮೊದಲು ಬಂದಿದೆ. ಇದಕ್ಕೆ ಮೊದಲು ತೆರಿಗೆ ರೂಪದಲ್ಲಿ ಒಂದು ಸಣ್ಣ ಮೊತ್ತ ಪಾವತಿಸಿ ಈ ಕುರಿತಾದ ಆರಂಭಿಕ ಪ್ರಕ್ರಿಯೆಯನ್ನು ಪೂರ್ತೀಕರಿಸಬೇಕು. ಆ ಬಳಿಕ ನಿಮ್ಮ ಬ್ಯಾಂಕ್ ಖಾತೆಗೆ ಹಣ ಬಂದು ಸೇರಲಿದೆ. ಅದರಂತೆ ತಾನು ಮೊದಲ ತೆರಿಗೆ ರೂಪದಲ್ಲಿ ಆ ಹಣ ಕಳುಹಿಸಿಕೊಟ್ಟೆ. ಅದಾದ ಬಳಿಕ ಈ ಟಾಸ್ಕ್‌ನಲ್ಲಿ ಭಾಗಿಯಾಗಲು ನಿಗದಿತ ಹಣ ನೀಡಬೇಕೆಂಬ ಮತ್ತೊಂದು ಸಂದೇಶ ಲಭಿಸಿದೆ. ಅದರಂತೆ ಆ ಹಣವನ್ನೂ ನಾನು ಆನ್‌ಲೈನ್ ಮೂಲಕ ಕಳುಹಿಸಿಕೊಟ್ಟೆ. ನಂತರ ಈ ಟಾಸ್ಕ್ ಪೂರ್ತೀಕರಿಸಲು ಇನ್ನೂ ಹಣ ನೀಡಬೇಕು. ನಂತರವಷ್ಟೇ ನಿಮ್ಮ ಖಾತೆಗೆ ಹಣ ಬಂದು ಸೇರಲಿದೆ ಎಂಬ ಮೂರನೇ ಸಂದೇಶ ಬಂದಿದೆ. ಅದನ್ನೂ ನಾನು ಪಾವತಿಸಿದೆ. ಆದರೆ ನಂತರ ಯಾವುದೇ ಸಂದೇಶ ಬಂದಿಲ್ಲ. ಮಾತ್ರವಲ್ಲ ನಾನು ಕಳುಹಿಸಿಕೊಟ್ಟ ಹಣವೂ ನನಗೆ ಹಿಂತಿರುಗಿ ಬಂದಿಲ್ಲ. ಹೀಗೆ ಆ ವಂಚನಾ ಜಾಲದವರು ನನ್ನಿಂದ ಒಟ್ಟಾರೆಯಾಗಿ ೧.೭೮ ಲಕ್ಷ ರೂ. ಲಪಟಾಯಿಸಿರುವುದಾಗಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆ ಯುವತಿ ತಿಳಿಸಿದ್ದಾರೆ. ಸೈಬರ್ ಕ್ರೈಮ್ ಪೊಲೀಸ್ ಠಾಣೆಯ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ಸಮಗ್ರ ತನಿಖೆ ಆರಂಭಿಸಿದ್ದಾರೆ. ಇಂತಹ ಆನ್‌ಲೈನ್ ವಂಚನಾ ಜಾಲದವರ ಬಲೆಗೆ ಸಿಲುಕಿ ಇತರ ಅನೇಕರು ಹಣ ಕಳೆದುಕೊಂಡಿದ್ದಾರೆ.
ಇಂತಹ ವಂಚನೆ ನಡೆಯುತ್ತಿರುವ ಬಗ್ಗೆ ಮಾಹಿತಿ ಲಭಿಸುವವರು ಅದನ್ನು ಪೊಲೀಸ್ ಸೈಬರ್ ಕ್ರೈಮ್ ಹೆಲ್ಪ್ ಲೈನ್ ನಂಬ್ರವಾದ ೧೯೩೦ಕ್ಕೆ ಕರೆದು ತಿಳಿಸುವಂತೆ ಪೊಲೀಸರು ಸಾರ್ವಜನಿಕರಲ್ಲಿ ಕೇಳಿಕೊಂಡಿದ್ದಾರೆ.