ಮನೆಯಿಂದ ಚಿನ್ನದ ಒಡವೆ, ನಗದು ಒಳಗೊಂಡಿದ್ದ ಬ್ಯಾಗ್ ಕಳವುಗೈದ ಪ್ರಕರಣದ ಆರೋಪಿ ಸೆರೆ
ಕಾಸರಗೋಡು: ಮನೆಯಿಂದ ಚಿನ್ನದೊಡವೆ ಮತ್ತು ನಗದು ಒಳಗೊಂಡಿದ್ದ ಬ್ಯಾಗ್ ಕಳವುಗೈದ ಪ್ರಕರಣದ ಆರೋಪಿಯನ್ನು ಬೇಕಲ ಪೊಲೀಸರು ಬಂಧಿಸಿದ್ದಾರೆ. ಪಯ್ಯನ್ನೂರಿನ ಖಾಸಗಿ ಸಂಸ್ಥೆಯಲ್ಲಿ ಸೇಲ್ಸ್ ಮೆನ್ ಆಗಿದ್ದ ತಿರುವನಂತಪುರ ಪೋತನ್‌ಕಾಡ್ ಮೇಲತ್ತಮಲದ ಶಾಜಿದಾ ಮಂಜಿಲ್‌ನ ಮೊಹಮ್ಮದ್ ಅಬ್ದುಲ್ ಹಾದಿ (೩೧) ಬಂಧಿತ ಆರೋಪಿ. ಆರೋಪಿ ಜನವರಿ ೨೫ರಂದು ಮುಂಜಾನೆ ಪಳ್ಳಿಕ್ಕರೆ ಚೇಟುಕುಂಡ್‌ನ ಮನೆಯೊಂದರ ಕಿಟಿಕಿ ಬಳಿ ಮೇಜಿನ ಮೇಲೆ ಇರಿಸಿದ್ದ ೪ ಪವನ್‌ನ ಚಿನ್ನದ ಸರ, ಕಾಲ್ಗೆಜ್ಜೆ ಮತ್ತು ಉಂಗುರ ಹಾಗೂ ೧೫೦೦ ರೂ. ಒಳಗೊಂಡ ಬ್ಯಾಗ್‌ನ್ನು ಬೆತ್ತದ ಸಹಾಯದಿಂದ ಹೊರತೆಗೆದು ಕಳವುಗೈದ ದೂರಿನಂತೆ ದಾಖಲಿಸಿಕೊಂಡ ಪ್ರಕರಣದಲ್ಲಿ ಆತನನ್ನು ಬಂಧಿಸಲಾಗಿದೆ. ಕದ್ದ ಚಿನ್ನವನ್ನು ಆರೋಪಿ ಕಣ್ಣೂರಿನ ಚಿನ್ನದಂಗಡಿಯೊಂದಕ್ಕೆ ಮಾರಾಟ ಮಾಡಿದ್ದನು. ಅದನ್ನೂ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಚೇಟು ಕುಂಡ್‌ನ ಅಂಗಡಿಯೊಂದರ ಸಿಸಿ ಟಿವಿ ಕ್ಯಾಮರಾದಲ್ಲಿ ಆರೋಪಿಯ ದೃಶ್ಯ ಮೂಡಿಬಂದಿತ್ತು. ಅದರ ಜಾಡು ಹಿಡಿದು ನಡೆಸಿದ ತನಿಖೆಯಲ್ಲಿ ಆತನನ್ನು ಬಂಧಿಸಲಾಗಿದೆ. ಆರೋಪಿಯ ವಿರುದ್ಧ ಚೇರ್ತಲ, ಪಟ್ಟಣಕ್ಕಾಡ್, ಆಟ್ಟಿಂಗಾಲ್, ಆಲಪ್ಪುಳ ಮತ್ತು ಪರಂಗಾಡ್ ಎಂಬೀ ಪೊಲೀಸ್ ಠಾಣೆಗಳಲ್ಲೂ ಬೇರೆ ಕೇಸುಗಳಿವೆಯೆಂದು ಪೊಲೀಸರು ತಿಳಿಸಿದ್ದಾರೆ. ಬಂಧಿತನನ್ನು ಬಳಿಕ ನ್ಯಾಯಾಂಗ ಬಂಧನದಲ್ಲಿರಿಸಲಾಗಿದೆ.