ಮನೆಯಿಂದ ಹಾಡಹಗಲೇ ತಾಮ್ರದ ಪಾತ್ರೆಗಳು ಕಳವು
ಮಂಜೇಶ್ವರ: ವರ್ಕಾಡಿಯಲ್ಲಿ ಮನೆಯೊಂದಕ್ಕೆ ಹಾಡಹಗಲೇ ಕಳ್ಳರು ನುಗ್ಗಿ ತಾಮ್ರದ ಪಾತ್ರೆಗಳನ್ನು ಕಳವುಗೈದ ಘಟನೆ ನಡೆದಿದೆ. ವರ್ಕಾಡಿ ನಾವಡ್ರಬೈಲು ಎಂಬಲ್ಲಿನ ಹರ್ಷವರ್ಧನ ಎಂಬವರ ಮನೆಯಿಂದ ಕಳವು ನಡೆದಿದೆ. ತಾಮ್ರದ ವಿವಿಧ ಪಾತ್ರೆಗಳ ಸಹಿತ ಸುಮಾರು 50 ಸಾವಿರ ರೂ.ಗಳ ಸಾಮಗ್ರಿಗಳನ್ನು ಕಳವುಗೈದಿರುವುದಾಗಿ ದೂರಲಾಗಿದೆ. ಹರ್ಷವರ್ಧನ ಮಂಗಳೂರಿನಲ್ಲಿ ನ್ಯಾಯವಾದಿಯಾ ಗಿದ್ದಾರೆ. ಅವರು ಕಳೆದ ಮಂಗಳವಾರ ಬೆಳಿಗ್ಗೆ 2 ಗಂಟೆಗೆ ಮನೆಯಿಂದ ತೆರಳಿ ರಾತ್ರಿ 8 ಗಂಟೆಗೆ ಮರಳಿದ್ದಾರೆ. ಈ ವೇಳೆ ಮನೆಯ ಹಿಂಭಾಗದ ಬಾಗಿಲು ಮುರಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಬಳಿಕ ನಡೆಸಿದ ತಪಾಸಣೆ ವೇಳೆ ತಾಮ್ರದ ಸಾಮಗ್ರಿಗಳು ಕಳವಿಗೀಡಾದ ಬಗ್ಗೆ ತಿಳಿದುಬಂದಿದೆ. ಈ ಬಗ್ಗೆ ಅವರು ಮಂಜೇಶ್ವರ ಪೊಲೀಸರಿಗೆ ದೂರು ನೀಡಿದ್ದಾರೆ.