ಮನೆಯಿಂದ 8 ಪವನ್ ಚಿನ್ನ, 60 ಸಾವಿರ ರೂ. ಕಳವು: ಆರೋಪಿ ಸೆರೆ

ಕಾಸರಗೋಡು: ಮನೆಯವರು ಕೆಲಸಕ್ಕೆ ಹೋದ ಸಂದರ್ಭದಲ್ಲಿ ಮನೆಗೆ ನುಗ್ಗಿ ನಗ-ನಗದು ಕಳವುಗೈದ ಘಟನೆ ನಡೆದಿದೆ. ಈ ಬಗ್ಗೆ ದೂರು ಲಭಿಸಿದ ತಕ್ಷಣ ವಿದ್ಯಾನಗರ ಪೊಲೀಸರು ನಡೆಸಿದ ತನಿಖೆಯಲ್ಲಿ ಆರೋಪಿಯನ್ನು ಬಂಧಿಸಲು ಸಾಧ್ಯವಾಗಿದೆ. ಮಧೂರಿಗೆ ಸಮೀಪದ ಅರಂತೋಡಿನ ಫೆಲಿಕ್ಸ್ ರೋಡ್ರಿಗಸ್ ಎಂಬವರ ಮನೆಯಲ್ಲಿ ಈ ಕಳವು ನಡೆದಿದೆ. ಮನೆಯ ಕಪಾಟಿನೊಳಗೆ ಇರಿಸಲಾಗಿದ್ದ ನಾಲ್ಕು ಲಕ್ಷ ರೂ. ಮೌಲ್ಯದ ಎಂಟು ಪವನ್‌ನ ಚಿನ್ನದ ಒಡವೆ ಹಾಗೂ 60,000  ರೂ. ನಗದು ಕಳವು ಗೈಯ್ಯಲಾಗಿದೆ ಎಂದು ವಿದ್ಯಾನಗರ ಪೊಲೀಸರಿಗೆ ನೀಡಿದ ದೂರಿನಲ್ಲಿ ಫೆಲಿಕ್ಸ್ ಡಿಸೋಜಾ ತಿಳಿಸಿದ್ದಾರೆ.

ಕೂಲಿ ಕಾರ್ಮಿಕನಾಗಿರುವ ಫೆಲಿಕ್ಸ್ ಮತ್ತು ಅವರ ಪತ್ನಿ ಮನೆಗೆ ಬೀಗ ಜಡಿದು ಬೆಳಿಗ್ಗೆ ಕೆಲಸಕ್ಕೆ ಹೋಗಿ ಸಂಜೆ ಮರಳುತ್ತಾರೆ. ಕಳೆದ ಕೆಲವು  ದಿನಗಳಿಂದ ನಗನಗದು ಇರಿಸಲಾಗಿದ್ದ ಕಪಾಟನ್ನು ಅವರು ತೆರೆದು ನೋಡಿರಲಿಲ್ಲ. ನಿನ್ನೆ ಅವರು ಅದನ್ನು ತೆರೆದು ನೋಡಿದಾಗ ಅದರೊಳಗಿದ್ದ ಚಿನ್ನದ ಒಡವೆ ಮತ್ತು ನಗದು ನಾಪತ್ತೆಯಾಗಿತ್ತು. ಆ ಬಗ್ಗೆ ನೀಡಲಾದ ದೂರಿನಂತೆ ವಿದ್ಯಾನಗರ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿರುವಂತೆಯೇ ಮನೆಯವರು ವ್ಯಕ್ತಪಡಿಸಿದ ಸಂಶಯದ ಆಧಾರದಲ್ಲಿ  ಅಲ್ಲೇ ಪಕ್ಕದ ನಿವಾಸಿ ರೋಬರ್ಟ್ ರೋಡ್ರಿಗಸ್ (53)  ಎಂಬಾತನನ್ನು ವಶಕ್ಕೆ ತೆಗೆದು ವಿಚಾರಣೆಗೊಳ ಪಡಿಸಿದಾಗ ಕಳವು ನಡೆಸಿರುವುದು ಆತನೇ ಆಗಿರುವುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಫೆಲಿಕ್ಸ್ ಡಿಸೋಜಾರ ಮನೆಯ ಬೀಗದ ಕೀಲಿ  ಇರಿಸುವ ಜಾಗದ ಬಗ್ಗೆ ಆರೋಪಿ ರೋಬರ್ಟ್‌ಗೆ ತಿಳಿದಿತ್ತೆಂದೂ, ಮನೆಯವರು ಬೀಗ ಜಡಿದು ಹೊರ ಹೋದ ವೇಳೆ ನೋಡಿ ಆತ ಆ ಬೀಗದ ಕೀಲಿ ಗೊಂಚಲು ಬಳಸಿ ಕಪಾಟಿ ನೊಳಗಿರಿಸಲಾಗಿದ್ದ ನಗ-ನಗದನ್ನು ಕಳವುಗೈದಿರುವುದಾಗಿ ತನಿಖೆಯಲ್ಲಿ ಸ್ಪಷ್ಟಗೊಂಡಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅದಕ್ಕೆ ಸಂಬಂಧಿಸಿ ವಿದ್ಯಾನಗರ ಪೊಲೀಸ್ ಠಾಣೆಯ ಎಸ್‌ಐ ಗಳಾದ ಅಜೀಶ್ ವಿ.ವಿ, ವಿ. ರಾಮಕೃಷ್ಣನ್, ಬಿಜು ಮತ್ತು ಸಿಪಿಒ ರೋಜನ್‌ರ ನೇತೃತ್ವದ ಪೊಲೀಸರ ತಂಡ ಆರೋಪಿಯನ್ನು ಬಂಧಿಸಿದೆ.

ಬಂಧಿತನು ಅಬಕಾರಿ ಪ್ರಕರಣವೊಂದರಲ್ಲೂ ಆರೋಪಿಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಕದ್ದ ಸಾಮಗ್ರಿಗಳಲ್ಲಿ ಒಂದು ಭಾಗವನ್ನು ಪತ್ತೆಹಚ್ಚಿ ವಶಪಡಿಸುವಲ್ಲಿ ಪೊಲೀಸರು ಸಫಲರಾಗಿದ್ದಾರೆ. ಬಾಕಿ ಉಳಿದುದನ್ನು ಪತ್ತೆಹಚ್ಚುವ ಯತ್ನದಲ್ಲಿ ಪೊಲೀಸರು ನಿರತರಾಗಿದ್ದಾರೆ.

Leave a Reply

Your email address will not be published. Required fields are marked *

You cannot copy content of this page