ಮನೆಯೊಳಗೆ ನಿದ್ರಿಸುತ್ತಿದ್ದ ಗೃಹಿಣಿ ನಾಗರಹಾವು ಕಚ್ಚಿ ದಾರುಣ ಮೃತ್ಯು
ಉಪ್ಪಳ: ಮನೆಯೊಳಗೆ ನಿದ್ರಿಸುತ್ತಿದ್ದ ಗೃಹಿಣಿ ನಾಗರ ಹಾವು ಕಚ್ಚಿ ಸಾವಿಗೀಡಾದ ದಾರುಣ ಘಟನೆ ನಡೆದಿದೆ. ಪೈವಳಿಕೆ ಕುರುಡಪದವು ನಿವಾಸಿ ದಿ| ಮಾಂಕು ಎಂಬವರ ಪತ್ನಿ ಚೋಮು (64) ಮೃತಪಟ್ಟ ದುರ್ದೈವಿಯಾಗಿದ್ದಾರೆ. ನಿನ್ನೆ ರಾತ್ರಿ 12 ಗಂಟೆ ವೇಳೆ ಘಟನೆ ನಡೆದಿದೆ. ಕಾಂಕ್ರೀಟ್ ಮನೆಯೊಳಗೆ ಚೋಮು ನಿದ್ರಿಸುತ್ತಿದ್ದರು. ರಾತ್ರಿ 12 ಗಂಟೆ ವೇಳೆಗೆ ಯಾವುದೋ ಜೀವಿ ಕೈಗೆ ಕಚ್ಚಿದ ಅನುಭವಗೊಂಡ ಚೋಮು ತಕ್ಷಣ ಎದ್ದು ಕೊಠಡಿಯೊಳಗೆ ಹುಡುಕಾಡಿದರೂ ಯಾವುದನ್ನೂ ಪತ್ತೆಹಚ್ಚಲು ಸಾಧ್ಯವಾಗಲಿಲ್ಲ. ಬಳಿಕ ಅವರು ಸಹೋದರನಿಗೆ ವಿಷಯ ತಿಳಿಸಿದರು. ಸಹೋದರ ಚೋಮು ಅವರ ಕೈಯನ್ನು ನೋಡಿದಾಗ ಗಾಯ ಕಂಡು ಬಂದಿದೆ. ಹಾವಿನ ಕಡಿತವೆಂದು ಸಂಶಯದಿಂದ ಮನೆಯ ಮತ್ತೊಂದು ಕೊಠಡಿ ಯೊಳಗೆ ಹುಡುಕಾಡಿದಾಗ ನಾಗರ ಹಾವು ಕಂಡು ಬಂದಿದೆ. ಇದರಿಂದ ಚೋಮು ಅವರಿಗೆ ಇದೇ ನಾಗರ ಹಾವು ಕಚ್ಚಿದೆ ಎಂದು ಖಚಿತಪಡಿಸಿ ನೆರೆಮನೆಯವರ ಸಹಾಯದಿಂದ ದೇರಳಕಟ್ಟೆ ಆಸ್ಪತ್ರೆಗೆ ಕೊಂಡೊಯ್ಯು ತ್ತಿದ್ದ ದಾರಿ ಮಧ್ಯೆ ಸಾವು ಸಂಭವಿಸಿದೆ. ಮೃತರು ಪುತ್ರಿ ಅಕ್ಕು, ಅಳಿಯ ಅಣ್ಣು, ಸಹೋದರರಾದ ಮತ್ತಡಿ, ಐತ್ತ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಇದೇ ವೇಳೆ ಚೋಮು ಅವರಿಗೆ ಕಚ್ಚಿದ ಹಾವನ್ನು ಹಾವು ಹಿಡಿಯುವವರು ತಲುಪಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದರು.